ಮನೋರಂಜನೆ

ತಮಿಳು ನಟ ಧನುಷ್‌ ನಮ್ಮ ಮಗ: ಸೂಕ್ತ ಸಾಕ್ಷ್ಯ ಸಲ್ಲಿಕೆಗೆ ನಟ ಧನುಷ್‌, ಮೇಲೂರು ದಂಪತಿಗೆ ಕೋರ್ಟ್ ಆದೇಶ

Pinterest LinkedIn Tumblr


ಮಧುರೈ: ತಮಿಳಿನ ಪ್ರತಿಭಾವಂತ ನಟ ಧನುಷ್‌ ತಮ್ಮ ಮಗ ಎಂದು ಹೇಳಿಕೊಂಡು ಮೇಲೂರಿನ ವೃದ್ಧ ದಂಪತಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸುತ್ತಿರುವ ಮದ್ರಾಸ್‌ ಹೈಕೋರ್ಟ್‌, ದಂಪತಿ ಹಾಗೂ ಧನುಷ್‌ಗೆ ಪ್ರಕರಣದ ಸಂಬಂಧ ಸೂಕ್ತ ಸಾಕ್ಷ್ಯಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ.

ಕೆಲ ದಿನಗಳ ಹಿಂದೆ ಆರ್‌.ಕತಿರೇಸನ್‌(65) ಹಾಗೂ ಕೆ. ಮೀನಾಕ್ಷಿ(53) ದಂಪತಿ, ‘ನಟ ಧನುಷ್‌ ಅಲಿಯಾಸ್‌ ಧನುಷ್‌ ಕೆ.ರಾಜ ತಮ್ಮ ಮಗ. ಆತ ಚೆನ್ನೈನ ಟಿ ನಗರ್ ಮೂಲದವನು. ನಟನಾಗಿ ಬೆಳೆದ ಮೇಲೆ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾನೆ. ನಮ್ಮ ಜೀವನ ನಿರ್ವಹಣೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆತನಿಗೆ ಕೋರ್ಟ್‌ ಸೂಚಿಸಬೇಕು’ ಎಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ದೂರು ದಾಖಲಿಸಿದ್ದರು.

ದೂರಿನಲ್ಲಿ ನಟ ಧನುಷ್‌ 1985ರ ನವೆಂಬರ್‌ 07ರಂದು ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ಜನಿಸಿದ್ದರು ಎಂದೂ ಸಹ ಉಲ್ಲೇಖಿಸಲಾಗಿದೆ.

ಆದರೆ, ಧನುಷ್‌ ತಮ್ಮ ವಿವರಣೆಯಲ್ಲಿ ತಾವು 1983ರ ಜುಲೈ 28 ರಂದು ಎಗ್ಮೋರ್‌ನಲ್ಲಿರುವ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನನ್ನ ತಂದೆ ಕೃಷ್ಣ ಮೂರ್ತಿ(ಅಲಿಯಾಸ್‌ ಕಸ್ತೂರಿ ರಾಜ) ಹಾಗೂ ತಾಯಿ ವಿಜಯಲಕ್ಷ್ಮಿ ಎಂದು ಹೇಳಿಕೊಂಡಿದ್ದಾರೆ. ನನ್ನ ಮೂಲ ಹೆಸರು ವೆಂಕಟೇಶ್‌ ಪ್ರಭು. 2003ರಲ್ಲಿ ಸಿನಿಮಾ ಜಿವನಕ್ಕೆ ಕಾಲಿಟ್ಟ ಬಳಿಕ ಹೆಸರು ಬದಲಾಯಿಸಿಕೊಂಡಿದ್ದೇನೆ. ನಾನು ಮೇಲೂರು ದಂಪತಿ ಮಗ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ, ಪ್ರಕರಣ ರದ್ದು ಮಾಡಬೇಕೆಂದು ಅವರು ಕೇಳಿಕೊಂಡಿದ್ದಾರೆ.

ಆದರೆ, ಕತಿರೇಸನ್‌ ದಂಪತಿ ತಾವು ತಮ್ಮ ನಿಲುವನ್ನು ಸೂಕ್ತ ಸಾಕ್ಷಗಳ ಮೂಲಕ ಸಾಭೀತು ಪಡಿಸುವುದಾಗಿ ಹೇಳಿದ್ದಾರೆ.

ಈ ಸಂಬಂಧ ವಿಚಾರಣೆ ಕೈಗೊಂಡಿರುವ ಹೈಕೋರ್ಟ್‌ ನ್ಯಾಯಮೂರ್ತಿ ಜಿ. ಚೋಕಲಿಂಗಂ ಇಬ್ಬರಿಗೂ ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿ ಎಂದು ಆದೇಶಿಸಿ, ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿದ್ದಾರೆ.

Comments are closed.