ಕರಾವಳಿ

ನೇತ್ರಾವತಿ ಸಂರಕ್ಷಣೆಗಾಗಿ ಉಪವಾಸ ಧರಣಿ ಹಾಗೂ ಪ್ರತಿಭಟನೆಗೆ ಚಾಲನೆ : ಪ್ರತಿಭಟನಾಕಾರರಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಸಂರಕ್ಷಣೆಗಾಗಿ ಹಾಗೂ ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಉಪವಾಸ ಧರಣಿ ಹಾಗೂ ಪ್ರತಿಭಟನೆಗೆ ಇಂದು ಬೆಳಗ್ಗೆ ನಗರದ ಪುರಭವನದ ಬಳಿ ಚಾಲನೆ ದೊರೆಯಿತು.

ನಗರದ ಪುರಭವನದ ಬಳಿಯ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಮಾಡುವ ಮೂಲಕ ಉಪವಾಸ ಧರಣಿಯನ್ನು ಆರಂಭಿಸಲಾಯಿತು. ಬಳಿಕ ಭಾರೀ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿಯದುರು ಉಪವಾಸ ಧರಣಿ ಆರಂಭಿಸಿದ್ದಾರೆ.

ಧರಣಿ ಸಭೆಯನ್ನುದ್ಡೇಶಿಸಿ ಸಮಿತಿ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಕರಾವಳಿಯ ಜನತೆಯ ಪಾಲಿಗೆ ಮರಣ ಶಾಸನ ಬರೆಯಲು ಹೊರಟ ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಕ್ಕೆ ಒತ್ತಾಯಿಸಿ ಜಿಲ್ಲೆಯ ಜನತೆ ಹಲವಾರು ರೀತಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರೂ ಸರಕಾರ ಯಾವ ಕೂಗಿಗೂ ಸ್ಪಂದಿಸಲಿಲ್ಲ. ಆ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ಈ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಇದು ರಾಜಕೀಯರಹಿತ, ಪಕ್ಷಾತೀತ, ಧರ್ಮಾತೀತ, ಜಾತ್ಯತೀತ ಹೋರಾಟವಾಗಿದೆ. ಹಾಗಾಗಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಧರ್ಮಗುರುಗಳು, ವಿದ್ಯಾರ್ಥಿ-ಕಾರ್ಮಿಕ ಸಂಘಟನೆಗಳ ಪ್ರಮುಖರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೇಮಾರು ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ, ಮಾಜಿ ಸಚಿವ ಕೃಷ್ಣ ಜೆ.
ಪಾಲೆಮಾರ್, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಂ.ಮಸೂದ್ ಮೊದಲಾದವರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.