ಕರಾವಳಿ

ಕಮಲಶಿಲೆ: ಮನೆಗೆ ಬಂದ 13 ಅಡಿ ಉದ್ದದ ಕಾಳಿಂಗ ಸರ್ಪ ಮರಳಿ ಕಾಡಿಗೆ

Pinterest LinkedIn Tumblr

ಕುಂದಾಪುರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಮನೆಯೊಂದರಲ್ಲಿ ಅವಿತಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕೆಲಕಾಲ ಆತಂಕ ಸ್ರಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ಕಮಲಶಿಲೆ ಎಂಬಲ್ಲಿ ನಡೆದಿದೆ.

ಕಮಲಶಿಲೆ ಬಾಡಮನೆ ವೆಂಕಟರಮಣ ರಾವ್ ಎನ್ನುವವರ ಮನೆಯ ಅಡುಗೆಕೋಣೆಯ ಗ್ಯಾಸ್ ಸಿಲಿಂಡರ್ ಇಡುವ ರ್‍ಯಾಕ್ಸ್ ಭಾಗದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದೆ. ಈ ಬಗ್ಗೆ ಆತಂಕಿತರಾದ ಮನೆಯವರು ಈ ವಿಚಾರವನ್ನು ಅಕ್ಕಪಕ್ಕದವರಿಗೆ ತಿಳಿಸಿದ್ದು ಕೂಡಲೇ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿ ಹೆಬ್ಬಾರ್ ಅವರು ಸ್ಥಳಕ್ಕಾಗಮಿಸಿ ನಾಜೂಕಾಗಿ ಕಾಳಿಂಗ ಸರ್ಪವನ್ನು ಹಿಡಿದು ಚೀಲದೊಳಗೆ ತುಂಬಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

ಕೃಷ್ಣಮೂರ್ತಿ ಹೆಬ್ಬಾರ್ ಅವರು ಉರಗ ಹಿಡಿಯುವುದರಲ್ಲಿ ಅನುಭವಿಗಳಾಗಿದ್ದು ಈವರೆಗೂ ೫೪ ಕಾಳಿಂಗ ಸರ್ಪಗಳನ್ನು ಹಿಡಿದಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ನೆಲೆಸಿದ್ದು ಆಹಾರ ಅರಸಿ ಮತ್ತು ಸಂತಾನೋತ್ಪತ್ತಿಗಾಗಿ ನಾಡಿನತ್ತ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.