
ಮಂಗಳೂರು , ಜ.25: ದಕ್ಷಿಣ ಕನ್ನಡ ಜಿಲ್ಲೆಯ 21ನೇ ಸಾಹಿತ್ಯ ಸಮ್ಮೇಳನ ಜನವರಿ 27ರಿಂದ 29ರವರಗೆ ಬೆಳ್ತಂಗಡಿಯ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಭರದ ಸಿದ್ದತೆಗಳು ನಡೆಯುತಿದೆ.
ಈ ಬಗ್ಗೆ ನಗರದ ಸರ್ಕ್ಯುಟ್ ಹೌಸ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾಹಿತಿ ನೀಡಿದರು. ಹಾವೇರಿ ಜಾನಪದ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಯವರ ಗೌರವಾಧ್ಯಕ್ಷತೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ಗೌರವ ಮಾರ್ಗದರ್ಶನದಲ್ಲಿ ಬೆಳ್ತಂಗಡಿಯ ಶಾಸಕರಾದ ವಸಂತ ಬಂಗೇರರ ಗೌರವ ಉಸ್ತುವಾರಿ ಮಾರ್ಗದರ್ಶನದ ಸ್ವಾಗತಿ ಸಮಿತಿಯ ನೇತೃತ್ವದಲ್ಲಿ ಡಾ.ಯಶೋವರ್ಮ, ಧರ್ಮದರ್ಶಿ ವಿಜಯರಾಘವ ಪಡ್ವೆಟ್ನಾಯ ಅವರನ್ನೊಳಗೊಂಡ ತಂಡದಿಂದ ತಯಾರಿ ನಡೆಯುತ್ತಿದೆ ಎಂದು ಕಲ್ಕೂರ ಹೇಳಿದರು.

ಮೂರು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ‘ಸ್ವಚ್ಛ ಭಾಷೆ,ಸ್ವಚ್ಛ ಜೀವನ,ಸ್ವಚ್ಛ ಭಾರತ ‘ ಆಶಯದೊಂದಿಗೆ ನಡೆಯಲಿದೆ.ಸಮ್ಮೇಳನದ ಧ್ವಜವನ್ನು ಉಜಿರೆ ಜುಮ್ಮಾ ಮಸೀದಿ ಮುಖ್ಯ ಗುರುಗಳಾದ ಅಬೂಸೂಫಿಯಾನ್ ಎಚ್.ಐ.ಇಬ್ರಾಹೀಂ ಮದನಿ ಅರಳಿಸಲಿದ್ದಾರೆ.ಜ.27ರಂದು ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಬ ನಡೆಯಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಶಾಸಕ ವಸಂತ ಬಂಗೇರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್, ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್, ಶಿಶು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಜಾನಪದ ಕಲಾವಿದರಾದ ಮಾಚಾರು ಗೋಪಾಲ ನಾಯ್ಕ,ಗಂಗು ಮೊದಲಾದವರಿಗೆ ಸನ್ಮಾನ ನಡೆಯಲಿದೆ. ಹಳೆ ಪುಸ್ತಕಗಳ ಪ್ರದರ್ಶನ ಚಿತ್ರಕಲೆ ರಂಗೋಲಿ ಪ್ರದರ್ಶನ ನಡೆಯಲಿದೆ. ಉಜಿರೆ ಎಸ್ಡಿಎಂ ಇಂದ್ರ ಪ್ರಸ್ಥ ಒಳಾಂಗಣ ಸಭಾಂಗಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಬಿ.ರಮಾನಾಥ ರೈ ಅವರು ಸಮ್ಮೇಳನದ ಕುರಿತ ಪೂರಕ ಮಾಹಿತಿ ನೀಡಿದರು.
ದ.ಕ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ತಮ್ಮಯ್ಯ,ಬೆಳ್ತಂಗಡಿ ತಾಲೂಕು ಕಸಾಪ ಅದ್ಯಕ್ಷ ಡಾ.ಬಿ.ಯಶೋವರ್ಮ,ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಮತ್ತಿತ್ತರರು ಈ ವೇಳೆ ಹಾಜಾರಿದ್ದರು.
Comments are closed.