ಕೋಲ್ಕತಾ: ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯೊಬ್ಬರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿರುವ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಿವಾಸಿಯಾಗಿರುವ 32 ಮಹಿಳೆಯೊಬ್ಬರು ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಬಸಿರ್ಹತ್ ಗ್ರಾಮದಲ್ಲಿರುವ ತಮ್ಮ ಸ್ನೇಹಿತೆಯೊಬ್ಬರನ್ನು ಭೇಟಿಯಾದ ಬಳಿಕ ಮರಳಿ ತಮ್ಮ ಮನೆಗೆ ಹೋಗುವ ಸಲುವಾಗಿ ಹಸ್ನಾಬಾದ್-ಸೀಲ್ದಾಹ್ ನ ಸ್ಥಳೀಯ ರೈಲನ್ನು ಹತ್ತಿದ್ದರು.
ಈ ವೇಳೆ ಇಬ್ಬರು ಪಾನಮತ್ತ ಪುರುಷರು ರೈಲನ್ನು ಹತ್ತಿ ಮಹಿಳಾ ಬೋಗಿಯ ಬಳಿ ಬಂದಿದ್ದಾರೆ. ಮಹಿಳಾ ಬೋಗಿಯಲ್ಲಿ ಮಹಿಳೆಯೊಬ್ಬರೇ ಇರುವುದನ್ನು ಕಂಡ ಇಬ್ಬರು ಕಾಮುಕರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಅಸಹಾಕಾರ ತೋರಿದ ಕಾರಣಕ್ಕೆ ಮಹಿಳೆಯನ್ನು ಚಲಿಸುವ ರೈಲಿನಿಂದ ತಳ್ಳಿದ್ದಾರೆಂದು ಮೂಲಗಳು ತಿಳಿಸಿವೆ.
ರೈಲಿನಿಂದ ಬಿದ್ದ ಮಹಿಳೆ ಎರಡು ರೈಲುಗಳ ಹಳಿಗಳ ಮಧ್ಯದಲ್ಲಿ ಬಿದ್ದಿದ್ದಾರೆ. ತೀವ್ರವಾಗಿಗೊಂಡ ಮಹಿಳೆ ನಿಧಾನಗತಿಯಲ್ಲಿ ತೆವಳಿಕೊಂಡು ಹೋಗಿ ರಸ್ತೆ ಬದಿಯೊಂದರ ಬಳಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಸ್ಥಳೀಯರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಎರಡು ಕಾಲುಗಳ ಮೂಳೆ ಮುರಿದಿದೆ. ಪ್ರಸ್ತುತ ಮಹಿಳೆಗೆ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಬರಸತ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಘಟನೆ ವೇಳೆ ರೈಲಿನಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿಗಳಿರಲಿಲ್ಲ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿವೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Comments are closed.