ರಾಷ್ಟ್ರೀಯ

ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ನಾನೇ: ಮುಲಾಯಂ ಸಿಂಗ್‌ ಯಾದವ್‌

Pinterest LinkedIn Tumblr

ಲಖನೌ: ಸಮಾಜವಾದಿ ಪಕ್ಷಕ್ಕೆ ಈಗಲೂ ನಾನೇ ರಾಷ್ಟ್ರೀಯ ಅಧ್ಯಕ್ಷನಾಗಿದ್ದೇನೆ ಎಂದು ಮುಲಾಯಂ ಸಿಂಗ್ ಯಾದವ್ ಭಾನುವಾರ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸಮಾಜವಾದಿ ಪಕ್ಷದ ಕೌಟುಂಬಿಕ ರಾಜಕಾರಣ ಬಿಕ್ಕಟ್ಟು ಕೂಡ ತಾರಕಕ್ಕೇರಿದೆ. ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗದ ಮುಂದೆ ಮುಲಾಯಂ ಸಿಂಗ್ ಬಣ ಹಾಗೂ ಸಿಎಂ ಅಖಿಲೇಶ್ ಸಿಂಗ್ ಯಾದವ್ ಅವರ ಬಣಗಳು ಬೇಡಿಕೆ ಇಟ್ಟಿರುವಂತೆಯೇ ಇತ್ತ ಮುಲಾಯಂ ಸಿಂಗ್ ಯಾದವ್ ಅವರು ಪಕ್ಷಕ್ಕೆ ಈಗಲೂ ತಾವೇ ರಾಷ್ಟ್ರೀಯ ಅಧ್ಯಕ್ಷ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಬಿಕ್ಕಟ್ಟಿನ ಕುರಿತಂತೆ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಮುಲಾಯಂ ಸಿಂಗ್ ಯಾದವ್ ಅವರು, “ಈ ಹಿಂದೆ ನಡೆದ ಸಮಾಜವಾದಿ ಪಕ್ಷದ ಕಾರ್ಯಕಾರಣಿ ಅಸಿಂಧು. ರಾಮ್‌ ಗೋಪಾಲ್’ಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯುವ ಹಕ್ಕಿಲ್ಲ. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆದ್ದು, ಪಕ್ಷದಲ್ಲಿ ಅವರಿಗೆ ಯಾವುದೇ ಅಧಿಕಾರವೂ ಇಲ್ಲ. ಶಿವಪಾಲ್‌ ಯಾದವ್ ಈಗಲೂ ಉತ್ತರ ಪ್ರದೇಶ ರಾಜ್ಯದ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದಾರೆ” ಎಂದು ಮುಲಾಯಂ ಸಿಂಗ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ.
ಅಂತೆಯೇ “ಈಗಲೂ ನಾನೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಪಕ್ಷಕ್ಕೆ ಸಂಬಂಧಿಸಿದ ಬೇರೆಯವರ ಸಹಿಗಳೆಲ್ಲವೂ ಸಹ ನಕಲಿ” ಎಂದು ಮುಲಾಂ ಸಿಂಗ್ ಹೇಳಿದ್ದಾರೆ.
ಪುತ್ರ ಅಖಿಲೇಶ್ ನೀಡಿರುವ ಶಾಸಕರ ದಾಖಲೆಗಳ ದೃಢೀಕರಣ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ
ಇನ್ನು ತಮಗೆ 200 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿರುವ ಸಿಎಂ ಅಖಿಲೇಶ್ ಯಾದವ್ ಅವರ ಕುರಿತಂತೆ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರು, ಚುನಾವಣಾ ಆಯೋಗಕ್ಕೆ ಅಖಿಲೇಶ್ ಸಲ್ಲಿಕೆ ಮಾಡಿರುವ ಶಾಸಕರ ಬೆಂಬಲದ ಪತ್ರಗಳ ಕುರಿತಂತೆ ತಮಗೆ ಅನುಮಾನವಿದೆ. ಹೀಗಾಗಿ ಪತ್ರಗಳ ದೃಢೀಕರಣ ಪರಿಶೀಲಿಸುವಂತೆ ಮುಲಾಯಂ ಸಿಂಗ್ ಯಾದವ್ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ನಾಳೆ ಅಧಿಕೃತವಾಗಿ ಚುನಾವಣಾ ಆಯೋಗಕ್ಕೆ ತೆರಳಿ ಈ ಬಗ್ಗೆ ಮನವಿ ಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಈ ಹಿಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಮರ್ ಸಿಂಗ್ ಅವರು, ಶಾಸಕರ ಬೆಂಬಲ ಪತ್ರಗಳಲ್ಲಿನ ಸಹಿಗಳು ನಕಲಿಯಾಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

Comments are closed.