
ಬೆಂಗಳೂರು: ನಗರದಲ್ಲಿ ಎಟಿಎಂ ವಾಹನದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿ ಡಾಮ್ನಿಕ್ ರಾಯ್ ಸಿಕ್ಕಿಬಿದ್ದಿದ್ದಾನೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಹೇಳಿಕೆ ನೀಡಿದ್ದು, ಸೋಮವಾರ ತಡರಾತ್ರಿ ಡಾಮ್ನಿಕ್ನ ಬಂಧನವಾಗಿದೆ ಎಂದು ತಿಳಿಸಿದ್ದಾರೆ. ಕೊಯಮತ್ತೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ಡಾಮ್ನಿಕ್ ಕೆಆರ್ ಪುರಂನ ಟಿನ್ ಫ್ಯಾಕ್ಟರಿ ಬಳಿ ಬಂದಿಳಿಯುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಭಾನುವಾರದಂದು ಡಾಮ್ನಿಕ್ ಪತ್ನಿ ಎಲ್ವಿನ್ಳನ್ನು ಪೊಲೀಸರು ಬಂಧಿಸಿದ್ದರು. ಸೇಲಂಗೆ ಹೋಗೋದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಡಾಮ್ನಿಕ್ ಎಲ್ವಿನ್ಳನ್ನು ಭೇಟಿ ಮಾಡಿಸುವಂತೆ ಸ್ನೇಹಿತ ಗೆರಾಲ್ಡ್ ಗೆ ಕರೆ ಮಾಡಿದ್ದ. ಗೆರಾಲ್ಡ್ ಸಂಜೆಯವರೆಗೂ ಬಂದು ಭೇಟಿಯಾಗದಂತೆ ಹೇಳಿದ್ದ. ಆದ್ರೆ ಆಗ ಪತ್ನಿ ಬಂಧನ ವಿಚಾರ ಡಾಮ್ನಿಕ್ಗೆ ತಿಳಿದಿರಲಿಲ್ಲ. ಸಂಜೆಯೊಳಗೆ ಹೆಂಡತಿ ಬಂಧನವಾಗಿರೋದು ತಿಳಿದ ಡಾಮ್ನಿಕ್ ಸ್ನೇಹಿತನ ಬಳಿ ಆಶ್ರಯ ಪಡೆಯೋದಕ್ಕೆ ಸಿದ್ಧತೆಯನ್ನು ನಡೆಸಿದ್ದ. ಸ್ನೇಹಿತ ಗೆರಾಲ್ಡ್ ಗೆ ಕರೆ ಮಾಡಿದ್ದ ಮಾಹಿತಿ ತಿಳಿದ ಪೊಲೀಸರು ಗೆರಾಲ್ಡ್ ನಿಂದ ಮತ್ತೆ ಕರೆ ಮಾಡಿಸಿ ಡಾಮ್ನಿಕ್ನನ್ನು ಮನೆಯ ಬಳಿ ಬರುವಂತೆ ಹೇಳಿಸಿದ್ದಾರೆ. ಗೆರಾಲ್ಡ್ ಮೂಲಕ ಡಾಮ್ನಿಕ್ನನ್ನು ಬೆಂಗಳೂರಿಗೆ ಕರೆಸಿಕೊಂಡ ಪೊಲೀಸರು ಕೆ ಆರ್ ಪುರಂ ಬಳಿಯ ಟಿನ್ ಫ್ಯಾಕ್ಟರಿ ಬಳಿ ಆರೋಪಿ ಡಾಮ್ನಿಕ್ನನ್ನು ಬಂಧಿಸಿದ್ದಾರೆ. ಆದ್ರೆ ಡಾಮ್ನಿಕ್ ಬಳಿ ಸದ್ಯಕ್ಕೆ ಹಣ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 23ರಂದು ಎಟಿಎಂಗೆ ಹಣ ಹಾಕುವ ವಾಹನ ಬ್ಯಾಂಕ್ ಬಳಿ ಬಂದಿದ್ದು, ಈ ವೇಳೆ ಚಾಲಕ ಡಾಮ್ನಿಕ್ ಯೂಟರ್ನ್ ತೆಗೆದುಕೊಳ್ಳುವುದಾಗಿ ಹೇಳಿ ವಾಹನದಲ್ಲಿದ್ದ ಒಟ್ಟು 1.37 ಕೋಟಿ ರೂಪಾಯಿಯಲ್ಲಿ 92 ಲಕ್ಷ ರೂ. ಹಣವಿದ್ದ ಬಾಕ್ಸ್ ತೆಗೆದುಕೊಂಡು ಪರಾರಿಯಾಗಿದ್ದ. ಕೂಡಲೇ ವಾಹನ ನಾಪತ್ತೆಯಾದ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದ್ರೆ ಇತ್ತ ಡಾಮ್ನಿಕ್ ರಾತ್ರಿಯವರೆಗೂ ಪಾಳು ಜಾಗದಲ್ಲಿ ವ್ಯಾನ್ ನಿಲ್ಲಿಸಿ ಟ್ರಾಫಿಕ್ ಕಡಿಯಾಗುವುದನ್ನೇ ಕಾಯ್ತಾ ಇದ್ದ. ಬಳಿಕ ವಾಹನವನ್ನು ಮೌಂಟ್ ಕಾರ್ಮಲ್ ಕಾಲೇಜಿನ ಬಳಿ ತಂದು ನಿಲ್ಲಿಸಿ ಅಲ್ಲಿಂದ ಹೆಂಡತಿಯೊಂದಿಗೆ ಎಸ್ಕೇಪ್ ಆಗಿದ್ದ. ನಿಲ್ಲಿಸಿದ್ದ ಕಾರಿನಲ್ಲಿ 45 ಲಕ್ಷ ರೂ. ಹಣ ಇತ್ತು. ನಂತರ ಡಾಮ್ನಿಕ್ ಅಂದು ರಾತ್ರಿ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಕೊಯಮತ್ತೂರಿಗೆ ಪ್ರಯಾಣ ಬೆಳೆಸಿದ್ದ.
ಪತ್ನಿಯನ್ನ ಬೆಂಗಳೂರಿಗೆ ಕಳಿಸಿದ್ದ: ಪೊಲೀಸರು ತನ್ನನ್ನು ಹುಡುಕುತ್ತಿದ್ದಾರಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕೋಕೆ ಪ್ಲಾನ್ ಮಾಡಿದ್ದ ಡಾಮ್ನಿಕ್ ರಾಯ್ ಪತ್ನಿ ಎಲ್ವಿನ್ಳನ್ನು ಬೆಂಗಳೂರಿಗೆ ಕಳುಹಿಸಿದ್ದ. ಹೀಗಾಗಿ ಬೆಂಗಳೂರಿಗೆ ಬಂದ ಎಲ್ವಿನ್ ಭಾನುವಾರ ರಾತ್ರಿ ಬಾಣಸವಾಡಿಯ ಮನೆಯೊಂದರಲ್ಲಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಬಳಿಯಿದ್ದ 79.8 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ. ಉಳಿದ 12 ಲಕ್ಷ ರೂ. ಹಣದೊಂದಿಗೆ ನಾಪತ್ತೆಯಾಗಿದ್ದ ಪತಿ ಡಾಮ್ನಿಕ್ ಈಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
Comments are closed.