ಭೋಪಾಲ್(ನ. 01): ನಿನ್ನೆ ಸೋಮವಾರ ಪೊಲೀಸರ ಎನ್’ಕೌಂಟರ್’ನಲ್ಲಿ ಹತ್ಯೆಯಾಗುವ ಮುನ್ನ ಎಂಟು ಸಿಮಿ ಉಗ್ರರು ಇಲ್ಲಿಯ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಟೂತ್ ಬ್ರಷ್, ಮರದ ತುಂಡು ಮೊದಲಾದ ವಸ್ತುಗಳನ್ನು ಬಳಸಿದ್ದರೆಂಬ ಮಾಹಿತಿ ಹೊರಬಿದ್ದಿದೆ.
ಜೈಲಿನ ಎರಡು ಕೋಣೆಗಳ ಬೀಗ ತೆಗೆಯಲು ಇವೇ ವಸ್ತುಗಳನ್ನು ಬಳಸಿ ಡೂಪ್ಲಿಕೇಟ್ ಕೀಗಳನ್ನು ತಯಾರಿಸುತ್ತಾರೆ. ಬೀಗ ತೆಗೆದ ನಂತರ ಜೈಲ್ ವಾರ್ಡನ್ ರಮಾಶಂಕರ್ ಯಾದವ್’ರ ಕತ್ತು ಸೀಳುತ್ತಾರೆ. ಮತ್ತೊಬ್ಬ ಸಿಬ್ಬಂದಿ ಚರಣ್ ಸಿಂಗ್ ಅವರನ್ನು ಕುರ್ಚಿಗೆ ಕಟ್ಟಿಹಾಕುತ್ತಾರೆ. ಜೈಲಿನಲ್ಲಿದ್ದ ಬೆಡ್’ಶೀಟ್’ಗಳನ್ನು ಉಪಯೋಗಿಸಿ 25 ಅಡಿ ಎತ್ತರದ ಜೈಲಿನ ಗೋಡೆಯನ್ನು ಹತ್ತುತ್ತಾರೆ. ಇದು ಪೊಲೀಸ್ ಅಧಿಕಾರಿಗಳು ಕೊಟ್ಟ ವಿವರಣೆಯಾಗಿದೆ.
ಉಗ್ರರು ತಪ್ಪಿಸಿಕೊಂಡಿದ್ದ ಜೈಲಿನಲ್ಲಿ ಒಟ್ಟು 29 ಶಂಕಿತ ಸಿಮಿ ಉಗ್ರರನ್ನು ಕೂಡಿಹಾಕಲಾಗಿತ್ತು. ಇವರ ಪೈಕಿ 8 ಉಗ್ರರು ತಪ್ಪಿಸಿಕೊಂಡರು. ಪರಾರಿಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಎಂಟು ಉಗ್ರರನ್ನು ಎನ್’ಕೌಂಟರ್’ನಲ್ಲಿ ಹತ್ಯೆಗೈಯುತ್ತಾರೆ.
ಆಪರೇಷನ್ ಹೇಗೆ?
ಗುಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖೇಜ್ರಾ ನುಲ್ಲಾ ಎಂಬಲ್ಲಿ ಈ ಉಗ್ರರು ತಪ್ಪಿಸಿಕೊಂಡು ಹೋಗುತ್ತಿರುವಾಗ ಪೊಲೀಸರು ಸುತ್ತುವರಿಯುತ್ತಾರೆ. ಪೊಲೀಸರನ್ನ ಕಂಡೊಡನೆ ಉಗ್ರರು ದಾಳಿ ಮಾಡುತ್ತಾರೆ. ಆಗ ಮೂವರು ಪೊಲೀಸರಿಗೆ ಗಾಯವಾಗುತ್ತದೆ. ಕೂಡಲೇ ಪೊಲೀಸರು 43 ಸುತ್ತು ಗುಂಡಿನ ದಾಳಿ ನಡೆಸಿ ಎಲ್ಲಾ ಎಂಟರು ಉಗ್ರರನ್ನು ಸಂಹರಿಸುತ್ತಾರೆ. ನಾಲ್ಕು ನಾಡ ಪಿಸ್ತೂಲು, ಮೂರು ಚಾಕುಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ.
ಸ್ಥಳೀಯರು ಹೇಳುವುದೇನು?
ಪೊಲೀಸ್ ಎನ್’ಕೌಂಟರ್’ನಲ್ಲಿ ಹತ್ಯೆಯಾದ ಎಂಟು ಉಗ್ರರ ಬಳಿ ಶಸ್ತ್ರಾಸ್ತ್ರಗಳಿದ್ದವು ಎಂಬ ಪೊಲೀಸರ ವಾದವನ್ನು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಅಲ್ಲಗಳೆದಿದ್ದಾರೆ. ಈ ವ್ಯಕ್ತಿಗಳ ಬಳಿ ಯಾವುದೇ ಆಯುಧಗಳಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಡಿಜಿಪಿಯವರು, ಸತ್ಯಾಂಶ ತಿಳಿಯಲು ತನಿಖೆ ನಡೆಸಬೇಕಾಗಬಹುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ
Comments are closed.