ಚೆನ್ನೈ: ‘ನಾನು ಮತ್ತು ಕಮಲಹಾಸನ್ ಇನ್ನು ಜತೆಯಾಗಿರುವುದಿಲ್ಲ’ ಎಂದು ಹೇಳುವ ಮೂಲಕ ನಟಿ ಗೌತಮಿ ತಡಿಮಲ್ಲ ಅವರು, ಕಮಲಹಾಸನ್ ಅವರೊಂದಿಗಿನ ‘ಲಿವಿಂಗ್ ಟುಗೆದರ್’ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.
‘ನನ್ನ ಬದುಕಿನ ದುಃಖದ ಸಂಗತಿಯನ್ನಿಂದು ಹೇಳಲು ಬಯಸಿದ್ದೇನೆ. ನಾನು ಮತ್ತು ಕಮಲಹಾಸನ್ ಇನ್ನು ಮುಂದೆ ಜತೆಯಾಗಿ ಇರುವುದಿಲ್ಲ. 13 ವರ್ಷ ಜತೆಗಿದ್ದು ಪ್ರಸ್ತುತ ದೂರವಾಗುತ್ತಿರುವುದು ನಾನು ನನ್ನ ಜೀವನದಲ್ಲಿ ಕೈಗೊಂಡ ಅತ್ಯಂತ ಕಠಿಣ ನಿರ್ಧಾರ ಇದಾಗಿದೆ’ ಎಂದು ಗೌತಮಿ ತಡಿಮಲ್ಲ ಟ್ವೀಟ್ ಮಾಡಿದ್ದಾರೆ.
ಪರಸ್ಪರ ದೂರವಾಗುತ್ತಿರುವ ಬಗ್ಗೆ ವಿವರಣೆ ನೀಡಿರುವ ಗೌತಮಿ ಅವರು, ದೂರ ಆಗುತ್ತಿರುವುದಕ್ಕೆ ಕಾರಣ ನೀಡಿಲ್ಲ. ತಾವು ನೀಡಿರುವ ವಿವರಣೆಯಲ್ಲಿ ಎಲ್ಲಿಯೂ ಕಮಲಹಾಸನ್ ಅವರನ್ನು ಟೀಕಿಸಿಲ್ಲ.
ನಮ್ಮ ದಾರಿಯಲ್ಲಿ ಜೀವನ ಮತ್ತು ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳಬೇಕು ಇಲ್ಲವೇ ಸತ್ಯವನ್ನು ಸ್ವೀಕರಿಸಬೇಕು ಎಂದಿರುವ ಗೌತಮಿ, ಆರೋಪ ಮಾಡುವುದು ಅಥವಾ ಸಹಾನುಭೂತಿ ಪಡೆಯುವುದು ನನ್ನ ಉದ್ದೇಶ ಆಗಿಲ್ಲ. ಬದಲಾವಣೆ ಎಂಬುದು ಅವಶ್ಯ. ಎಲ್ಲ ವ್ಯಕ್ತಿಗಳ ಬದುಕಿನಲ್ಲಿ ಬದಲಾವಣೆಗಳು ಸ್ವಾಗತಾರ್ಹವಾಗಿರುತ್ತವೆ ಎಂಬುದು ನನ್ನ ಬದುಕಿನಲ್ಲಿ ಅರಿವಾಗಿದೆ ಎಂದಿದ್ದಾರೆ.
ನನ್ನ ಜೀವನದ ಈ ಹಂತದಲ್ಲಿ ಸ್ವಂತ ಕೈಗೊಂಡಿರುವ ಈ ನಿರ್ಧಾರ ಬಹುಶಃ ಅತ್ಯಂತ ಕಷ್ಟ. ನನಗೆ ಈ ನಿರ್ಧಾರ ಅಗತ್ಯಗಳಲ್ಲೊಂದಾಗಿದೆ. ಮಗುವಿಗೆ ಒಳ್ಳೆ ತಾಯಿಯಾಗಿ ಉಳಿಯುವ ಜವಾಬದ್ದಾರಿಯಿದೆ. ನನಗೆ ವೈಯಕ್ತಿಕವಾಗಿ ಮನಶಾಂತಿಯ ಅಗತ್ಯವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತೆಲುಗಿನ ದಯಾಮಯಡು ಚಿತ್ರದ ಮೂಲಕ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿರಿಸಿದ ಗೌತಮಿಗೆ ಈಗ 48ರ ಹರೆಯ. ಪಂಚ ಭಾಷೆ ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ವಸ್ತ್ರವಿನ್ಯಾಸಕಿಯಾಗಿಯೂ ಹೆಸರು ಗಳಿಸಿದ್ದಾರೆ.
ಉದ್ಯಮಿ ಸಂದೀಪ್ ಭಾಟಿಯಾ ಅವರನ್ನು 1998ರಲ್ಲಿ ವಿವಾಹವಾಗಿದ್ದ ಗೌತಮಿ, 1999ರಲ್ಲಿ ಪುತ್ರಿ ಸುಬ್ಬಲಕ್ಷ್ಮೀಗೆ ಜನ್ಮವಿತ್ತಿದ್ದಾರೆ. ನಂತರದ ದಿನಗಳಲ್ಲಿ ಭಾಟಿಯಾ ಅವರಿಗೆ ವಿಚ್ಛೇದನ ನೀಡಿ, 2005ರಿಂದ ಕಮಲಹಾಸನ್ ಅವರೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಬೆಳೆಸಿದ್ದರು.
ಪ್ರಸ್ತುತ 61ರ ಹರೆಯ ಕಮಲಹಾಸನ್ ಅವರು ಈ ಹಿಂದೆ ಇಬ್ಬರಿಗೆ ವಿಚ್ಛೇದನ ನೀಡಿದ್ದಾರೆ. ಕಲಾವಿದೆ ವಾಣಿ ಗಣಪತಿ ಅವರ ಜತೆ 10 ವರ್ಷ ದಾಂಪತ್ಯ ನಡೆಸಿ, ನಂತರ 1988ರಲ್ಲಿ ವಿಚ್ಛೇದನ ನೀಡಿದ್ದಾರೆ. ತದನಂತರ, ಸಾರಿಕಾ ಅವರೊಟ್ಟಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಬೆಳೆಸಿದ್ದ ಅವರು, 1986ರಲ್ಲಿ ಮೊದಲ ಮಗಳು ಶೃತಿ ಹಾಸನ್ ಜನಿಸಿದ ನಂತರ ವಿವಾಹವಾಗಿದ್ದರು. ಎರಡನೇ ಪುತ್ರಿ ಅಕ್ಷರಾ 1991ರಲ್ಲಿ ಜನಿಸಿದ್ದರು. 2004ರಲ್ಲಿ ಕಮಲಹಾಸನ್ ಮತ್ತು ಸಾರಿಕಾ ಅವರ ಸಂಬಂಧ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯುವ ಮೂಲಕ ಕೊನೆಗೊಂಡಿತ್ತು.
Comments are closed.