ಬೆಂಗಳೂರು:‘ನಮಗಾಗಿ ನಾವು ಜೆಡಿಎಸ್ ಪಕ್ಷದಲ್ಲಿ ಇಲ್ಲ. ನಮ್ಮನ್ನು ನಂಬಿರುವ ಲಕ್ಷಾಂತರ ಕಾರ್ಯಕರ್ತರಿಗಾಗಿ ಇದ್ದೇವೆ’ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಾವು ಪಕ್ಷಕ್ಕೆ ಬೇಕಿಲ್ಲ ಎಂದಿದ್ದರೆ, ಪಕ್ಷದಿಂದ ನಮ್ಮನ್ನು ಹೊರಹಾಕಲಿ. ಅಮಾನತು ಮಾಡಿರುವುದು ಏಕೆ?’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಶಾಸಕ ಸ್ಥಾನಕ್ಕೆ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ದಲಿತರ ಮೇಲೆ ಕುಮಾರಸ್ವಾಮಿಗೆ ಅಪಾರ ಕಾಳಜಿ ಹುಟ್ಟಿದೆ. ಹಾಗಾದರೆ ಜೆಡಿಎಸ್ ಅಧ್ಯಕ್ಷ ಸ್ಥಾನವನ್ನು ದಲಿತರಿಗೇ ನೀಡಲಿ. ಪಕ್ಷ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಲಿ’ ಎಂದೂ ಜಮೀರ್ ಸವಾಲು ಹಾಕಿದರು.
‘ವಿಧಾನಸೌಧದ ಬಳಿ ವಕೀಲರೊಬ್ಬರ ಹಣ ವಶಪಡಿಸಿಕೊಂಡ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಅದು ಫ್ಲ್ಯಾಟ್ ಖರೀದಿಸಲು ತರುತ್ತಿದ್ದ ಹಣ ಎಂದೂ ವಕೀಲರು ಹೇಳಿಕೆ ನೀಡಿದ್ದಾರೆ. ಇನ್ನೊಬ್ಬರ ಮೇಲೆ ಕುಮಾರಸ್ವಾಮಿ ಆರೋಪ ಮಾಡುವುದು ಸರಿಯಲ್ಲ’ ಎಂದರು.
Comments are closed.