ಕರ್ನಾಟಕ

ಉಕ್ಕಿನ ಸೇತುವೆ ವೆಚ್ಚ ₹2,200 ಕೋಟಿಗೆ ಹೆಚ್ಚಳ!

Pinterest LinkedIn Tumblr

bbmpಬೆಂಗಳೂರು: ಸಾರ್ವಜನಿಕರ ವ್ಯಾಪಕ ವಿರೋಧದ ಮಧ್ಯೆಯೇ ಬಸವೇಶ್ವರ ವೃತ್ತದಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯವರೆಗೆ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ನಿರ್ಮಾಣದ ವೆಚ್ಚ ₹2,200 ಕೋಟಿಗೆ ಏರಿಕೆಯಾಗಲಿದೆ.

ಯೋಜನೆ ಕುರಿತು ಮಾಧ್ಯಮ ಪ್ರತಿನಿಧಿಗಳ ಸಲಹೆ ಪಡೆಯಲು ವಿಕಾಸಸೌಧದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮಂಗಳವಾರ ನಡೆಸಿದ ಸಭೆ ಬಳಿಕ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಯೋಜನಾ ವೆಚ್ಚ ಹೆಚ್ಚಳವಾಗಲಿರುವ ಖಚಿತ ಮಾಹಿತಿಯನ್ನು ‘ಪ್ರಜಾವಾಣಿ’ಗೆ ನೀಡಿದರು.

‘ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್‌ ಮಾಲ್‌ವರೆಗೆ ಉಕ್ಕಿನ ಸೇತುವೆ ನಿರ್ಮಿಸಲು ₹1,791 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಉಕ್ಕಿನ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಆರಂಭವಾಗುವ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದ್ದು, ಸಚಿವ ಸಂಪುಟದ ಅನುಮೋದನೆ ಪಡೆಯಬೇಕಿದೆ. ಹಾಗಾಗಿ ನನ್ನ ಹೆಸರು ಉಲ್ಲೇಖಿಸಬೇಡಿ’ ಎಂದೂ ತಿಳಿಸಿದರು.

ಮಾಡಿಯೇ ತೀರುವೆ ಎಂದ ಜಾರ್ಜ್‌: ‘ಬೆಂಗಳೂರಿನಲ್ಲಿ 1.20 ಕೋಟಿ ಜನರಿದ್ದಾರೆ. ಈ ಪೈಕಿ 3–4 ಸಾವಿರ ಜನ ಮಾತ್ರ ವಿರೋಧಿಸಿದ್ದಾರೆ. 299 ಜನ ಯೋಜನೆಗೆ ಬೆಂಬಲ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ದಟ್ಟಣೆ ಕಡಿಮೆ ಮಾಡಲು ಯೋಜನೆ ಅನುಷ್ಠಾನ ಮಾಡಿಯೇ ಸಿದ್ಧ’ ಎಂದು ಬೆಂಗಳೂರು ಅಭಿವೃದ್ದಿ ಸಚಿವ ಜಾರ್ಜ್‌ ಪ್ರತಿಪಾದಿಸಿದರು.

ಹೆಬ್ಬಾಳದವರೆಗೆ ನಿರ್ಮಿಸಿದರೆ ಸಂಚಾರ ದಟ್ಟಣೆಗೆ ಪರಿಹಾರ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯವರೆಗೆ ಉಕ್ಕಿನ ಸೇತುವೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವಿಸ್ತರಣಾ ಯೋಜನೆಗೆ ಮತ್ತೊಮ್ಮೆ ಟೆಂಡರ್‌ ಕರೆಯಲಾಗುವುದು ಎಂದೂ ಅವರು ಹೇಳಿದರು.

ಜಾರ್ಜ್‌ ಮಾತಿನ ವರಸೆ
ಮಾಧ್ಯಮ: ವಿರೋಧಿಸುವವರ ಅಭಿಪ್ರಾಯಕ್ಕೆ ಏಕೆ ಬೆಲೆ ಕೊಡುತ್ತಿಲ್ಲ?
ಜಾರ್ಜ್‌: ವಿರೋಧಿಸುವವರು ಬೇಕಾದರೆ ನಮ್ಮ ಬಳಿ ಬಂದು ಮಾತನಾಡಲಿ. ಅವರೇ ಸಭೆ ಕರೆದರೂ ಹೋಗಲು ನಾನು ತಯಾರು.

ಮಾಧ್ಯಮ: ಸರ್ಕಾರ ಸಭೆ ಆಯೋಜಿಸುವ ಬದಲು, ಜನರೇ ಸಭೆ ಕರೆಯಲಿ ಎಂದರೆ ಹೇಗೆ?
ಜಾರ್ಜ್‌: ಯಾರೂ ವಿರೋಧಿಸಿಲ್ಲ. ಕೆಲವು ಮಂದಿಯಿಂದ ಗೊಂದಲ ಸೃಷ್ಟಿ. ಹಾಗಾಗಿ ಅವರೇ ಕರೆಯಬೇಕು.

ಮಾಧ್ಯಮ: ಉಕ್ಕಿನ ಸೇತುವೆ ಹಾದುಹೋಗುವ ಆಸುಪಾಸಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಹವಾಲು ಸಲ್ಲಿಸಿದೆಯಲ್ಲವೇ?
ಜಾರ್ಜ್‌: ಅದನ್ನೆಲ್ಲಾ ಕೇಳುತ್ತಾ ಕೂರಲಿಕ್ಕೆ ಆಗುತ್ತದೆಯೇ. ಬಿಬಿಎಂಪಿ ವಾರ್ಡ್‌ ಸಮಿತಿ ಮಾಡಿದ್ದು, ವಾರ್ಡ್‌ ಸಭೆ ನಡೆಸಿ ಅಹವಾಲು ಸ್ವೀಕರಿಸಿದ್ದೇವೆ. ಅದನ್ನು ಬಿಟ್ಟು ಏನೂ ಮಾಡಲಾಗದು.

ಮಾಧ್ಯಮ: ಬಿಡಿಎಯಲ್ಲಿ ನಡೆದ ಅಕ್ರಮದ ಬಗ್ಗೆ ಪ್ರತಿವರ್ಷ ಮಹಾಲೇಖಪಾಲರು, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಬಿಡಿಎ ಬಿಟ್ಟು ಬೇರೆ ಸಂಸ್ಥೆ ಸಿಗಲಿಲ್ಲವೇ?
ಜಾರ್ಜ್‌: ದೇಶದಲ್ಲಿಯೇ ಅತ್ಯುತ್ತಮ ಹೆಸರು ಪಡೆದ ಸಂಸ್ಥೆ ಬಿಡಿಎ. ಅದಕ್ಕೆ ಅನೇಕ ಪ್ರಶಸ್ತಿಯೂ ಬಂದಿದೆ.

ಮಾಧ್ಯಮ: ಇದಕ್ಕಿಂತ ಹೆಚ್ಚಿನ ಸಂಚಾರ ದಟ್ಟಣೆ ಜೆ.ಸಿ.ರಸ್ತೆ, ಗೂಡ್ಸ್‌ಶೆಡ್‌ ರಸ್ತೆಯಲ್ಲಿದೆ. ಅಲ್ಲಿ ಪರಿಹಾರ ಕಲ್ಪಿಸದೇ ಉಕ್ಕಿನ ಸೇತುವೆ ಇಲ್ಲಿ ನಿರ್ಮಿಸಲು ಮುಂದಾಗಿರುವುದು ಏಕೆ?
ಜಾರ್ಜ್: ಏನೂ ಮಾಡದೇ ಇದ್ದರೆ ಸರ್ಕಾರ ಟೇಕಾಫ್‌ ಆಗಿಲ್ಲ, ನಿದ್ದೆ ಮಾಡುತ್ತಿದೆ ಎಂದು ನೀವೇ ಬೈಯುತ್ತೀರಿ. ಮಾಡಲು ಹೋದರೆ ವಿರೋಧಿಸುತ್ತೀರಿ. ಏನು ಮಾಡುವುದು.

ಮಾಧ್ಯಮ: ಕೊಲಂಬಿಯಾ ಏಷ್ಯಾ ಬಳಿ ನಿಮ್ಮ ಮತ್ತು ಕಾಂಗ್ರೆಸ್‌ ನಾಯಕರ ಆಸ್ತಿ ಇದೆ ಎಂಬ ಕಾರಣಕ್ಕೆ ಯೋಜನೆ ಮಾಡುತ್ತಿದ್ದೀರಾ?
ಜಾರ್ಜ್‌: ಅಲ್ಲಿ ನನ್ನ ಆಸ್ತಿ ಇದೆ ಎಂದು ಸಾಬೀತು ಪಡಿಸಿದರೆ ಸರ್ಕಾರಕ್ಕೆ ಬರೆದುಕೊಡುತ್ತೇನೆ.

‘ಕಾಮಾಲೆ ಕಣ್ಣಲ್ಲಿ ನೋಡಬೇಡಿ’
‘ಎಲ್ಲವನ್ನೂ ಕಾಮಾಲೆ ಕಣ್ಣಿನಲ್ಲಿಯೇ ನೋಡುವುದು ಯಾಕೆ. ವಿರೋಧ ವ್ಯಕ್ತಪಡಿಸುವವರು ಮಾತ್ರ ನಿಮಗೆ ಕಾಣಿಸುತ್ತಾರಾ. ನೀವೇನು ಬಿಜೆಪಿ ಪರನಾ. . . .’ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಂದ ಸಹನೆ ಕಳೆದುಕೊಂಡ ಸಚಿವ ಜಾರ್ಜ್‌ ಹೀಗೆ ಪ್ರಶ್ನಿಸಿದರು.

‘ಉಕ್ಕಿನ ಸೇತುವೆ ವಿರೋಧಿಸುವವರನ್ನು ಕರೆದು ಮಾತನಾಡಬಹುದಲ್ಲವೇ’ ಎಂಬ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಜಾರ್ಜ್‌, ‘ಯಾರ್ರೀ ವಿರೋಧಿಸುತ್ತಿದ್ದಾರೆ. ನಾಲ್ಕೈದು ಸಾವಿರ ಜನರ ವಿರೋಧವನ್ನೇ ದೊಡ್ಡದು ಮಾಡುತ್ತಿದ್ದೀರಾ… ಪರ ಇರುವವರು ಯಾರೂ ನಿಮಗೆ ಕಾಣುವುದಿಲ್ಲವೇ? ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿದಾಗ ಬಿಜೆಪಿಯವರು ಸದನದಲ್ಲಿ ಏಕೆ ವಿರೋಧಿಸಲಿಲ್ಲ’ ಎಂದು ರೇಗಿದರು.

‘ಕೇಂದ್ರವೇ ಅನುಷ್ಠಾನ ಮಾಡಲಿ’
‘ಯೋಜನಾ ವೆಚ್ಚ ₹500 ಕೋಟಿ ಹೆಚ್ಚಾಯಿತು ಎಂದು ಆಪಾದಿಸುತ್ತಿರುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಪಕ್ಷದ ಸರ್ಕಾರದ ಮೂಲಕ ₹1,300 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಿಸಲಿ’ ಎಂದು ಜಾರ್ಜ್‌ ಸವಾಲು ಹಾಕಿದರು.

‘ಉತ್ತರ ಪ್ರದೇಶದ ಚುನಾವಣೆಗೆ ಹಣ ಹೊಂದಿಸಲು ಯೋಜನೆ ರೂಪಿಸಲಾಗಿದೆ’ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆಪಾದನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು 2018ರ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆ ಎದುರಿಸಬೇಕು.

₹1,300 ಕೋಟಿ ವೆಚ್ಚದಲ್ಲಿ ಕೇಂದ್ರದಿಂದ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಒಂದು ತಿಂಗಳ ಒಳಗೆ  ಘೋಷಣೆ ಮಾಡಿದರೆ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್‌, ಶೋಭಾ ಅವರಿಗೆ ಕೃತಜ್ಞತೆ ಹೇಳುವೆ. ಅವರಿಗೂ ಚುನಾವಣೆಗೆ ಅನುಕೂಲವಾಗಲಿದೆ’ ಎಂದರು.

ನಾಲ್ಕು ಕಡೆ ಟ್ರೀಪಾರ್ಕ್‌ ನಿರ್ಮಾಣ
ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ಕಡಿಯಲಾಗುವ 812 ಮರಗಳ ಬದಲಿಗೆ 20 ಸಾವಿರ ಗಿಡ ಬೆಳೆಸಲು ನಾಲ್ಕು ಕಡೆ ಟ್ರೀ ಪಾರ್ಕ್‌ ನಿರ್ಮಿಸಲಾಗುವುದು ಎಂದು ಜಾರ್ಜ್‌ ಹೇಳಿದರು.

ಹೆಣ್ಣೂರು ಬಂಡೆ, ಅಂಜನಾಪುರ ಬಂಡೆ, ತಾವರೆಕೆರೆ ಬಂಡೆ ಸೇರಿದಂತೆ 4 ಕಡೆ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದೆ. ಈ ಜಾಗದಲ್ಲಿ ಟ್ರೀಪಾರ್ಕ್‌ ನಿರ್ಮಿಸಲಾಗುವುದು ಎಂದರು.

Comments are closed.