ಕಡಬ : ಚಿಲ್ಲರೆ ವಿವಾದದಿಂದ ಬೇಸತ್ತು ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆಗೈದಿದ್ದ ದೇವದಾಸ್ ಮೃತದೇಹವನ್ನು ಊರಿಗೆ ಕೊಂಡೊಯ್ಯುವ ದಾರಿ ಮಧ್ಯೆ ಆಂಬ್ಯುಲೆನ್ಸನ್ನು ಕಡಬ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿ ಮೃತರ ಪುತ್ರ ಪವನ್ ಜತೆಗೂಡಿ ಅವರ ಊರವರು, ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಇದೇ ವೇಳೆ ಮೃತ ದೇವದಾಸ್ ಅವರ ಪುತ್ರ ಪವನ್ ಸುಬ್ರಹ್ಮಣ್ಯ ಠಾಣೆಗೆ ತೆರಳಿ ಯುವತಿ ಹಾಗೂ ಕಡಬ ಪೋಲೀಸ್ ಠಾಣಾ ಸಿಬ್ಬಂದಿ ಪುಟ್ಟಸ್ವಾಮಿ ವಿರುದ್ಧ ದೂರನ್ನು ನೀಡಿದರು
‘ಠಾಣೆಯಲ್ಲಿ ಠಾಣಾಧಿಕಾರಿ ಇಲ್ಲದ ಸಮಯದಲ್ಲಿ ಪುಟ್ಟಸ್ವಾಮಿ ಹಾಗೂ ಇತರ ಪೊಲೀಸ್ ಸಿಬ್ಬಂದಿ ನನ್ನ ತಂದೆಯನ್ನು ಮತ್ತು ಯುವತಿಯನ್ನು ಸಮಾಧಾನ ಮಾಡಿ ಕಳುಹಿಸಿರುವುದಾಗಿ ಹೇಳಿರುತ್ತಾರೆ. ಆದರೆ ಪುಟ್ಟಸ್ವಾಮಿ ಎಂಬ ಕಾನ್‌ಸ್ಟೇಬಲ್ ಚಾಲಕನನ್ನು ಬಸ್‌ಗೆ ಹಿಂತಿರುಗುವಂತೆ ಹೇಳಿದ್ದಲ್ಲದೆ ನನ್ನ ತಂದೆಯವರ ಅಂಗಿ ಪ್ಯಾಂಟ್ ತೆಗೆಸಿದ್ದಾರೆ. ಆ ಸಮಯದಲ್ಲಿ ಅವರಲ್ಲಿದ್ದ ವೈಯಕ್ತಿಕ ಹಣ ೫೦೦ ರೂ. ಅನ್ನು ಕಂಡು ತಂದೆಯವರು ಸುಳ್ಳು ಹೇಳುತ್ತಿದ್ದಾರೆಂದು ಹಲ್ಲೆ ನಡೆಸಿರುತ್ತಾರೆ. ಅಲ್ಲದೆ ಪುಟ್ಟಸ್ವಾಮಿ ಹೊಡೆದ ನಂತರ ಯುವತಿ ಸೌಮ್ಯಾಳ ಕೈಯಲ್ಲೂ ಇವರ ಕೆನ್ನೆಗೆ ಹೊಡೆದಿರುವುದಾಗಿ ಅಲ್ಲಿದ್ದ ಪ್ರಾಯಾಣಿಕರು ನನಗೆ ತಿಳಿಸಿರುತ್ತಾರೆ. ಈ ವಿಚಾರವಾಗಿ ಹಿಂತಿರುಗಿ ಬಸ್‌ಗೆ ಬಂದು ಸುಬ್ರಹ್ಮಣ್ಯಕ್ಕೆ ನಿರ್ವಾಹಕನಾಗಿ ಕರ್ತವ್ಯದಲ್ಲಿ ತೆರಳುತ್ತಿರುವಾಗಲೇ ತೀವ್ರ ಮನನೊಂದ ತಂದೆಯವರು ಆತ್ಮಹತ್ಯೆಗೈಯುವುದಾಗಿ ಬರೆದಿಟ್ಟು ಸುಬ್ರಹ್ಮಣ್ಯದ ಕುಮಾರಧಾರಾ ನದಿ ಬಳಿ ಬಸ್ ತಲುಪಿದ ಕೂಡಲೇ ಬಸ್‌ನಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ವಿಚಾರವಾಗಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪವನ್ ದೂರಿನಲ್ಲಿ ವಿವರಿಸಿದ್ದಾರೆ.
ಕಡಬ ಪೊಲೀಸ್ ಠಾಣೆಯಲ್ಲಿ ಚಿಲ್ಲರೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಯುವತಿಯ ಎದುರು ನಿರ್ವಾಹಕರಿಗೆ ಅವಮಾನ ಮಾಡಿದ ಕಾರಣದಿಂದಾಗಿಯೇ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘದ ಮುಖಂಡರು ಹಾಗೂ ದೇವದಾಸ್ ಅವರ ಸಂಬಂಧಿಕರು ಸಂಬಂಧಪಟ್ಟ ಪೊಲೀಸ್ ಸಿಬಂದಿಯನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು.
ಪೊಲೀಸ್ ಸಿಬಂದಿ ವಿವೇಚನಾರಹಿತ ನಡೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಮುಂದೆ ಪೊಲೀಸರಿಂದ ಈ ರೀತಿಯ ತಪ್ಪು ನಡೆಯಬಾರದು. ಅವರ ತಪ್ಪಿನ ಅರಿವಾಗಬೇಕಾದರೆ ಅವರು ಸ್ಥಳಕ್ಕೆ ಬಂದು ದೇವದಾಸ್ ಅವರ ಮೃತದೇಹದ ಮುಖ ನೋಡಬೇಕು ಎಂದು ಪಟ್ಟುಹಿಡಿದರು.
ಆ ಸಂದರ್ಭ ಪುತ್ತೂರು ಎಎಸ್ಪಿ ರಿಷ್ಯಂತ್ ಹಾಗೂ ಪುತ್ತೂರು ಗ್ರಾಮಾಂತರ ವೃತ್ತನಿರೀಕ್ಷಕ ಅನಿಲ್ ಕುಲಕರ್ಣಿ ಆಕ್ರೋಶಿತರನ್ನು ಸಮಾಧಾನಪಡಿಸಿ ಮೃತರ ಅಂತ್ಯಸಂಸ್ಕಾರದ ವಿಧಿಗಳನ್ನು ಮುಗಿಸಿ ಅನಂತರ ಘಟನೆಯ ಕುರಿತು ನಿಮ್ಮ ಅಹವಾಲುಗಳನ್ನು ನಮ್ಮ ಮುಂದಿಡಿ. ಉನ್ನತ ಅಧಿಕಾರಿಗಳ ಮೂಲಕ ನಾವು ತನಿಖೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಪೊಲೀಸರಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಭರವಸೆ ನೀಡಿದರು.
ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲಾ, ಸುಳ್ಯ ಪೊಲೀಸ್ ವೃತ್ತನಿರೀಕ್ಷಕ ಕೃಷ್ಣಯ್ಯ, ಸುಳ್ಯ ಎಸ್‌ಐ ಚಂದ್ರಶೇಖರ್, ಪುತ್ತೂರು ಗ್ರಾಮಾಂತರ ಎಸ್‌ಐ ಖಾದರ್, ಬಂಟ್ವಾಳ ಟ್ರಾಫಿಕ್ ಎಸ್‌ಐ ರತನ್ ಸ್ಥಳದಲ್ಲಿದ್ದು ಬಂದೋಬಸ್ತ್ ಏರ್ಪಡಿಸಿದ್ದರು.

Comments are closed.