ಕರ್ನಾಟಕ

ಕಾವೇರಿ ವಿಷಯದಲ್ಲಿ ಸಂಸದರು ಸಾಮೂಹಿಕ ರಾಜೀನಾಮೆ ನೀಡಲಿ-ಸಾಹಿತಿ, ಬುದ್ಧಿಜೀವಿ, ಕಲಾವಿದರ ಅಭಿಪ್ರಾಯ

Pinterest LinkedIn Tumblr

champaಬೆಂಗಳೂರು, ಸೆ. ೨೧ – ರಾಜ್ಯದಲ್ಲಿ ಎಲ್ಲ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡುವ ಮೂಲಕ ಪ್ರಧಾನಿ ನರೇಂದ್ರಮೋದಿ ಅವರ ಮೇಲೆ ಒತ್ತಡ ಹಾಕದ ಹೊರತು ಕಾವೇರಿ ಸಮಸ್ಯೆಗೆ ಪರಿಹಾರ ದೊರಕದು ಎಂದು ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರು ಇಂದು ಇಲ್ಲಿ ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ದಿವ್ಯ ಮೌನ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು, ಅವರು ಅದೇ ರೀತಿ ಮೌನ ಮುಂದುವರೆಸಿದರೆ ಒಕ್ಕೂಟ ವ್ಯವಸ್ಥೆಯಿಂದಲೇ ಹೊರ ಬರುವ ಮೂಲಕ ಪ್ರತ್ಯೇಕ ಕನ್ನಡ ರಾಷ್ಟ್ರಕ್ಕಾಗಿ ಹೋರಾಡುವ ಕಾಲ ದೂರವಿಲ್ಲ. ಇಂತಹುದಕ್ಕೆ ಅವಕಾಶ ಮಾಡಿಕೊಡದೆ ಸಮಸ್ಯೆ ಪರಿಹಾರಿಸಬೇಕು ಎಂದು ಆಗ್ರಹಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಸಾಹಿತಿಗಳಾದ ಮರುಳ ಸಿದ್ದಪ್ಪ, ಪ್ರೊ. ಚಂದ್ರಶೇಖರ್ ಪಾಟೀಲ್, ಬಿ.ಟಿ. ಲಲಿತಾ ನಾಯಕ್, ಎಸ್.ಜಿ. ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಜಿ.ಕೆ. ಗೋವಿಂದರಾವ್, ನಲ್ಲೂರ್ ಪ್ರಸಾದ್, ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ, ರಂಗಾಯಣದ ನಿರ್ದೇಶಕ ಜನಾರ್ಧನ್ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯದ ಸಂಸದರು ರಾಜೀನಾಮೆ ನೀಡಬೇಕು; ಕಾವೇರಿ ಹೋರಾಟದಲ್ಲಿ ಮುಂದೆ ಎದುರಾಗಬಹುದಾದ ಎಲ್ಲಾ ರೀತಿಯ ಹೋರಾಟಗಳಿಗೆ ಸಂಪೂರ್ಣ ತೊಡಗಿಸಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸಿದರು. ಅಲ್ಲದೆ, ರಾಜ್ಯದ ರೈತರ ದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲವಿದೆ ಎಂದು ಘೋಷಿಸಿದರು.
ಮರುಳ ಸಿದ್ದಪ್ಪ ಮಾತನಾಡಿ, ರಾಜ್ಯ ಸರ್ಕಾರದ ಮೇಲೆ ಪಿತೂರಿ ನಡೆಸಲಾಗುತ್ತಿದೆ. ಪ್ರಧಾನಿ ಅವರ ಮೌನ ಗೊಂದಲಕ್ಕೆ ಎಡೆ ಮಾಡಿದೆ. ಸುಪ್ರೀಂಕೋರ್ಟ್‌ನ ತೀರ್ಪು ಆಘಾತಕಾರಿ. 1924 ರಲ್ಲಿ ಮಾಡಿದ ಒಪ್ಪಂದವನ್ನು ರದ್ದು ಮಾಡಿ ಹೊಸದಾಗಿ ಒಪ್ಪಂದ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ. ಇದಕ್ಕಾಗಿ ರಾಜ್ಯದ ಸಂಸದರು ರಾಜೀನಾಮೆ ನೀಡಬೇಕು ಅದಕ್ಕಾಗಿ ಹೋರಾಡೋಣ ಎಂದು ಹೇಳಿದರು.
ನಲ್ಲೂರು ಪ್ರಸಾದ್ ಮಾತನಾಡಿ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ ಮಾಡದ ಹೊರತು ಸಮಸ್ಯೆಗೆ ಪರಿಹಾರವಿಲ್ಲ. ತಮಿಳುನಾಡನ್ನು ಓಲೈಸಲು ರಾಜ್ಯದ ಜನರಿಗೆ ಘನಘೋರ ಅನ್ಯಾಯ ಮಾಡಲಾಗಿದೆ. ಇಂತಹ ಸುಪ್ರೀಂಕೋರ್ಟ್‌ನ ತೀರ್ಪು ಖಂಡನೀಯ.
ಪ್ರೊ. ಚಂದ್ರಶೇಖರ್ ಪಾಟೀಲ್ ಮಾತನಾಡಿ, ಅಂತರರಾಷ್ಟ್ರೀಯ ಜಲ ವಿವಾದದಲ್ಲಿ ಸುಪ್ರೀಂಕೋರ್ಟ್ ಮೂಗು ತೂರಿಸಲು ಬರುವುದಿಲ್ಲ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿದ್ದರೂ ಸುಪ್ರೀಂಕೋರ್ಟ್ ಅನಗತ್ಯ ಪ್ರವೇಶ ಮಾಡಿದೆ. 2 ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್‌ಗೆ ಗುಲಾಮರಾಗಿರುವುದೇ ಕಾವೇರಿ ಸಮಸ್ಯೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಕೆ. ಗೋವಿಂದ ರಾವ್ ಮಾತನಾಡಿ, ಸುಪ್ರೀಂಕೋರ್ಟ್‌ನ ಜಡ್ಜ್‌ಗಳೇನೂ ಪರಮಾತ್ಮರಲ್ಲ, ಅಹಂಕಾರದಿಂದ ನೀಡಿರುವ ತೀರ್ಪನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕಾಗಿದೆ. ರಾಜ್ಯ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸಬೇಕು. ಕೇಂದ್ರದ ಸಚಿವರು, ಬಿಜೆಪಿ ಸಂಸದರು, ನಾಯಕರು, ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಪಿತೂರಿ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸುಪ್ರೀಂಕೋರ್ಟ್‌ನ ತೀರ್ಪು ಖಂಡನೀಯ, ನ್ಯಾಯ ಕೇಳಲು ಹೋದವರ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ನೋಡಿದರೆ ಇದೊಂದು ಉದ್ದೇಶಪೂರ್ವಕ ತೀರ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ತೀರ್ಪು ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಿಗೆ ಮಾನಸಿಕ ಖಾಯಿಲೆ ಇರಬೇಕು. ಅವರನ್ನು ಉತ್ತಮ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ನೀಡುವುದು ಒಳಿತು ಎಂದು ಹೇಳಿದರು.

Comments are closed.