ಮಂಗಳೂರು: ಅಡುಗೆ ಮನೆ ಸ್ವಚ್ಛವಾಗಿದ್ದರೆ ಆರೋಗ್ಯವೂ ಸ್ವಸ್ಥ. ಆದರೆ ಪಾತ್ರೆಗಳಲ್ಲಿ, ಪಾತ್ರೆ ತೊಳೆಯುವ ಬೇಸಿನ್ ನಲ್ಲಿ, ಟ್ಯಾಂಕ್ ಗಳಲ್ಲಿ, ನೆಲದಲ್ಲಿ ಗಡುಸು ನೀರಿನ ಕಲೆಗಳು, ದಪ್ಪಗೆ ಅಂಟಿಕೊಂಡಿರುವ ಕಲೆಗಳು ಹೇಸಿಗೆ ಹುಟ್ಟಿಸುತ್ತವೆ. ಇದನ್ನು ಸ್ವಚ್ಛಗೊಳಿಸುವುದೇ ಹೆಚ್ಚಿನವರ ಸಮಸ್ಯೆ.
ನೀರು ಹೆಚ್ಚು ಗಡಸಾಗಿರುವುದು, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಶಿಯಂ ಅಂಶಗಳು ನೀರಿನಲ್ಲಿ ಅತ್ಯಧಿಕವಾಗಿರುವುದು ಇಂತಹ ಕಲೆಗಳನ್ನು ಹೆಚ್ಚಿಸುತ್ತವೆ. ಇದನ್ನು ಹಾಗೇ ಬಿಟ್ಟರೆ ನಂತರ ತಿಪ್ಪರಲಾಗ ಹಾಕಿ ತೊಳೆದರೂ ಇವು ಹೋಗದು. ಬೇಸಿನ್, ನೀರಿನ ಟ್ಯಾಂಕ್ ತಳದಲ್ಲಿ ಹಿಡಿದಿರುವ ಇವುಗಳನ್ನು ಹೋಗಲಾಡಿಸಲು ಒಂದಿಷ್ಟು ಟೆಕ್ನಿಕ್ ಗಳಿವೆ.
* ಪಾತ್ರೆಗಳು: ಪಾತ್ರೆಗಳಲ್ಲಿ ಹಿಡಿದಿರುವ ನೀರಿನ ಕಲೆಗಳನ್ನು ಹೋಗಲಾಡಿಸಲು ಆರೋಗ್ಯ ಹಾನಿಕಾರಕವಾದ ರಾಸಾಯನಿಕಗಳನ್ನು ಬಳಸುವುದು ಒಳ್ಳೆಯದಲ್ಲ. ನಿಂಬೆರಸ ಮತ್ತು ಅಡುಗೆ ಸೋಡದಿಂದ ಪಾತ್ರೆಯಲ್ಲಿ ಹಿಡಿದಿರುವ ನೀರಿನ ಲವನಾಂಶಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹುಣಸೆಹಣ್ಣಿನ ನೀರಿನಲ್ಲಿ ಪಾತ್ರೆ ಪಗಡೆಗಳನ್ನು ನೆನೆಸುವುದು ಕೂಡ ಕಲೆಗಳನ್ನು ಹೋಗಲಾಡಿಸಲು ಸಹಕಾರಿ.
* ನೀರಿನ ಟ್ಯಾಂಕಿನ ಸ್ವಚ್ಛತೆ: ನೀರನ್ನು ಸಂಗ್ರಹಿಸಿಡುವ ಟ್ಯಾಂಕ್ ಯಾವತ್ತೂ ಸ್ವಚ್ಛ, ಶುಭ್ರವಾಗಿರಬೇಕು. ಸಾಲ್ಟ್ ಪೇಪರ್ ಬಳಸಿ ಟ್ಯಾಂಕಿಯಲ್ಲಿ ಹಿಡಿದಿರುವ ನೀರಿನ ಲವನಾಂಶಗಳ ಕಲೆಗಳನ್ನು ಹೋಗಲಾಡಿಸಬಹುದು. ನಂತರ ಬ್ಲೀಚಿಂಗ್ ಪೌಡರ್ ಬಳಸಿ ಟ್ಯಾಂಕ್ ನ್ನು ಉಜ್ಜಿದರೆ ಸಾಕು.
* ನೆಲದ ಸ್ವಚ್ಛತೆ: ಕಲೆಗಳು ನೆಲದ ಸೌಂದರ್ಯವನ್ನು ಹಾಳು ಮಾಡುತ್ತವೆ. ಫ್ಲೋರ್ ನಲ್ಲಿ ಹಿಡಿದಿರುವ ಗಡಸು ನೀರಿನ ಕಲೆಗಳನ್ನು ಹೋಗಲಾಡಿಸಲು ನೆಲವನ್ನು ವಿನೆಗರ್ ನಲ್ಲಿ ಅದ್ದಿರುವ ಬಟ್ಟೆಯಿಂದ ಉಜ್ಜಿರಿ. ಹೆಚ್ಚು ದಪ್ಪಗೆ ಕಲೆಗಳು ಅಂಟಿದ್ದರೆ ಯಾವುದಾದರೂ ಗಟ್ಟಿ ಸಾಧನದಿಂದ ಉಜ್ಜಿ ಸ್ವಚ್ಛಗೊಳಿಸಿರಿ.
* ಬಟ್ಟೆಗಳಲ್ಲಿನ ಕಲೆ: ಗಡಸು ನೀರಿನಲ್ಲಿ ತೊಳೆದರೆ ಬಟ್ಟೆಗಳ ಬಣ್ಣ ಮಸುಕಾಗಬಹುದು ಅಥವಾ ಬಣ್ಣ ಹೋಗಬಹುದು. ಇದಕ್ಕಾಗಿ ಒಂದು ಕಪ್ ಡಿಟರ್ಜೆಂಟ್ ಮತ್ತು ಒಂದು ಕಪ್ ವಾಟರ್ ಕಂಡಿಷನರ್ ಬಳಸಿ ಬಟ್ಟೆ ತೊಳೆಯಿರಿ.
* ಗಡಸು ನೀರು: ಗಡಸು ನೀರನ್ನು ತೆಳುವಾಗಿಸುವುದು ಮುಂದಿನ ಕೆಲಸ. ಇದಕ್ಕಾಗಿ ಕೊಂಚ ವಾಟರ್ ಕಂಡಿಷನರ್ ಬಳಸಿರಿ. ವಾಟರ್ ಕಂಡಿಷನರ್ ಗಳು ಹೆಚ್ಚಿನ ದಿನಸಿ ಅಂಗಡಿಗಳಲ್ಲಿ ದೊರಕುತ್ತದೆ. ನೀರಿನಲ್ಲಿರುವ ಸೋಡಿಯಂ ಪ್ರಮಾಣ ಕಡಿಮೆ ಮಾಡಿ ಕುಡಿಯಲು ವಾಟರ್ ಸಾಪ್ಟ್ನರ್ ಸಿಸ್ಟಮ್ ಬಳಸುವುದು ಉತ್ತಮ.



Comments are closed.