
ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ಶಾಲಾ ಬಾಲಕನ ಕಣ್ಣಿನಲ್ಲಿ ಕಲ್ಲುಗಳು ಬೀಳುತ್ತಿವೆ. ವಿಸ್ಮಯವನ್ನು ನೋಡಲು ಬಾಲಕನ ಮನೆ ಮುಂದೆ ಜನ ಜಾತ್ರೆ ಸೇರುತ್ತಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿ ನಿರುವಗಲ್ ಗೊಲ್ಲರಹಟ್ಟಿ ಈಗ ಜನರ ಆಕರ್ಷಣೆಯ ಕೇಂದ್ರವಾಗಿದೆ. ಗ್ರಾಮದ ಲಕ್ಷ್ಮಿಕಾಂತರಾಜು ಹಾಗೂ ನೀಲಮ್ಮ ಅವರ ಮಗ, 8ನೇ ತರಗತಿ ಓದುತ್ತಿರುವ ಪುನೀತ್‌ಕುಮಾರ ಎಲ್ಲರ ಕೇಂದ್ರ ಬಿಂದು. ಈತನ ಕಣ್ಣಿನಿಂದ ಹೆಸರು, ಅಲಸಂದೆ ಕಾಳಿನ ಗಾತ್ರದ ಕಲ್ಲುಗಳು ಹೊರಬರುತ್ತಿವೆ.
ಪುನೀತ್‌ಕುಮಾರ್ ಹುಳಿಯಾರಿನ ವಾಸವಿ ಶಾಲೆಯಲ್ಲಿ ಓದುತ್ತಿದ್ದಾನೆ. ಹದಿನೈದು ದಿನದ ಹಿಂದೆ ಏಕಾಏಕಿ ಕಣ್ಣಿನಿಂದ ಕಲ್ಲುಗಳು ಬರ ತೊಡಗಿದ್ದು, ಅಂದಿನಿಂದ ಶಾಲೆಗೆ ಇತಿಶ್ರೀ ಹಾಡಿದ್ದಾನೆ. ವಿಷಯದ ತಿಳಿದ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರು ತಂಡತಂಡವಾಗಿ ಪುನೀತ್ ಮನೆ ಬಳಿ ಹಗಲು– ರಾತ್ರಿ ಸೇರುತ್ತಿದ್ದಾರೆ.
‘ಶಾಲೆಯಲ್ಲಿ ಪಾಠ ಕೇಳುತ್ತಿದ್ದಾಗ ಕಣ್ಣಿನಲ್ಲಿ ಏನೋ ಒತ್ತಿದಂತಾಯಿತು. ಕಣ್ಣು ಉಜ್ಜಿಕೊಂಡೆ. ಕಲ್ಲು ಬಿತ್ತು. ತಕ್ಷಣ ಶಿಕ್ಷಕರಿಗೆ ಹೇಳಿದೆ. ಆ ದಿನ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಹುರುಳಿಕಾಳು ಗಾತ್ರದ 5 ಕಪ್ಪು ಕಲ್ಲುಗಳು ಕಣ್ಣಿನಿಂದ ಉದುರಿದವು. ಶಿಕ್ಷಕರು ಪೋಷಕರನ್ನು ಕರೆಸಿ ನನ್ನನ್ನು ವೈದ್ಯರ ಬಳಿ ಕಳಿಸಿಕೊಟ್ಟರು. ವೈದ್ಯರ ಎದುರಲ್ಲೇ ಒಂದು ಕಲ್ಲು ಬಂತು. ಆದರೂ ವೈದ್ಯರು ನಂಬಲಿಲ್ಲ. ತಿಪಟೂರಿಗೆ ಕಣ್ಣಿನ ಸರ್ಜನ್ ಬರುತ್ತಾರೆ ಅಲ್ಲಿಗೆ ತೋರಿಸಿ ಎಂದರು’ ಎಂದು ಪುನೀತ್‘ಪ್ರಜಾವಾಣಿ’ಗೆ ತಿಳಿಸಿದ.
‘ಅಂದಿನಿಂದ ಕಲ್ಲುಗಳು ನಿರಂತರವಾಗಿ ಉದುರುತ್ತಿವೆ. ಆ ಕಲ್ಲುಗಳು ಎಲ್ಲಿಂದ ಬರುತ್ತವೆ ಎಂಬುದು ಗೊತ್ತಿಲ್ಲ. ಕಲ್ಲು ಬೀಳುವ ಒಂದು ನಿಮಿಷಕ್ಕು ಮುಂಚೆ ಬಲಗಣ್ಣಿನ ಕೆಳಭಾಗದಲ್ಲಿ ಊದಿಕೊಂಡಂತೆ ಭಾಸವಾಗುತ್ತದೆ. ತುರುಕೆ ಶುರುವಾಗುತ್ತದೆ. ಕಣ್ಣು ಉಜ್ಜಿದರೆ ಕಲ್ಲು ಬರುತ್ತದೆ. ಅಷ್ಟು ಬಿಟ್ಟರೆ ಕಣ್ಣಿನಲ್ಲಿ ಯಾವುದೇ ನೋವು ಕಾಣುವುದಿಲ್ಲ. ಎಚ್ಚರ ಇರುವಾಗ ಅರ್ಧ, ಒಂದು ಗಂಟೆಗೊಮ್ಮೆ ಕಲ್ಲು ಬೀಳುತ್ತವೆ. ನಿದ್ರೆಯಲ್ಲಿರುವಾಗ ಕಲ್ಲುಗಳು ಬರುವುದಿಲ್ಲ ಹಾಗೂ ಯಾವುದೇ ತೊಂದರೆ ಇಲ್ಲ’ ಎಂದು ವಿವರಿಸಿದ.
ಪುನೀತ್‌ಕುಮಾರ್ ತಂದೆ ಲಕ್ಷ್ಮಿಕಾಂತರಾಜು ಮಾತನಾಡಿ, ‘ಇದೆಲ್ಲ ಹೇಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ವೈದ್ಯರ ಬಳಿಯು ತೋರಿಸಿದೆ. ಕಣ್ಣಿನ ಸರ್ಜನ್‌ಬಳಿ ಮಗನನ್ನು ಕರೆದುಕೊಂಡು ಹೋಗಲು ಸಮಯ ಸಿಕ್ಕಿಲ್ಲ. ಜನರು ಇದು ಪವಾಡ ಎಂದು ಹೇಳುತ್ತಿದ್ದಾರೆ. ದೇವರು, ಶಾಸ್ತ್ರ ಕೇಳಿಸಿದ್ದಾಗಿದೆ’ ಎಂದು ನೊಂದು ಕೊಂಡರು.
‘ನಾವು ಕೂಲಿ ಕಾರ್ಮಿಕರು. ಇಟ್ಟಿಗೆ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದೇವೆ. ಪುನೀತ್‌ನಮಗೆ ಹಿರಿ ಮಗ. ಅವನ ಕಣ್ಣಿಗೆ ತೊಂದರೆಯಾದರೆ ಎಂಬ ಆತಂಕ ಕಾಡುತ್ತಿದೆ. ಹದಿನೈದು ದಿನದಿಂದ ದುಡಿಮೆಗೆ ಹೋಗದೆ ಮಗನನ್ನು ಕಾಯುವಂತಾಗಿದೆ’ ಎಂದು ತಾಯಿ ನೀಲಮ್ಮ ತಿಳಿಸಿದರು.
ಗ್ರಾಮದ ಯುವಕ ಮಧು ಮಾತನಾಡಿ, ‘ಪುನೀತನ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗನನ್ನು ತಜ್ಞ ವೈದ್ಯರಿಗೆ ತೋರಿಸುವಷ್ಟು ಅವರಿಗೆ ಆರ್ಥಿಕ ಚೈತನ್ಯವಿಲ್ಲ. ಯಾರಾದರೂ ಅವರಿಗೆ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.
*
ಅಪರೂಪದ ಪ್ರಕರಣ
ಕಣ್ಣಿನ ನೀರು ಸಾಧಾರಣವಾಗಿ ಉಪ್ಪಿನಂಶ ಒಳಗೊಂಡಿರುತ್ತದೆ. ಇದರಲ್ಲಿ ವ್ಯತ್ಯಾಸವಾದಾಗ ನೀರಿನಂಶ ಕಲ್ಲಿನ ರೂಪ ಪಡೆದು ಕೆಳಗೆ ಬೀಳುತ್ತದೆ. ಇದರಲ್ಲಿ ವಿಸ್ಮಯ ಏನು ಇಲ್ಲ. ಬಾಲಕನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು. ಇಂಥ ಪ್ರಕರಣಗಳು ಅಪರೂಪ.
ಡಾ.ಮಂಜುನಾಥ್,
ನೇತ್ರ ತಜ್ಞರು, ತುಮಕೂರು ಜಿಲ್ಲಾಸ್ಪತ್ರೆ
*
ಓದಿನಲ್ಲಿ ಚುರುಕಾಗಿದ್ದಾನೆ. ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾನೆ. ಶಾಲೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾಟಕ ಆಡುತ್ತಿದ್ದಾನೆ ಅನ್ನಿಸುವುದಿಲ್ಲ. ಆತನ ಕಣ್ಣಿನಿಂದ ಕಲ್ಲು ಬೀಳುವುದನ್ನು ನಾವೆಲ್ಲ ಶಿಕ್ಷಕರು ನೋಡಿದ್ದೇವೆ. ಇದೊಂದು ವಿಸ್ಮಯ.
ಬಿ.ಎಸ್.ನಟರಾಜ್,
ತರಗತಿ ಶಿಕ್ಷಕ.
(ಪ್ರಜಾವಾಣಿ)
Comments are closed.