ಬೆಂಗಳೂರು, ಆ. ೧೯- ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಮುಂದಿನ ತಿಂಗಳಿನಿಂದ ಮಧ್ಯಾಹ್ನದ ಬಿಸಿಯೂಟ ನೀಡುವುದಾಗಿ ಮೇಯರ್ ಮಂಜುನಾಥ್ ರೆಡ್ಡಿ ಅವರು ಇಂದಿಲ್ಲಿ ತಿಳಿಸಿದರು.
ನಗರದ ಅರಮನೆ ಆವರಣದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರ ಕಾರ್ಮಿಕರ ಮಹಾಸಂಘ ಹಾಗೂ ಸಫಾಯಿ ಕರ್ಮಚಾರಿಗಳ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಗುತ್ತಿಗೆ ಪೌರ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಈ ವಿಷಯ ತಿಳಿಸಿದರು.
ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಯೋಜನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ತಿಂಗಳಿಂದ ಇದು ಜಾರಿಗೆ ಬರಲಿದೆ ಎಂದರು.
ಗುತ್ತಿಗೆದಾರರ ಕಪಿಮುಷ್ಠಿಯಿಂದ ಗುತ್ತಿಗೆ ಪೌರ ಕಾರ್ಮಿಕರನ್ನು ಬಿಡುಗಡೆ ಮಾಡಿ ಕಾಯಂ ಪೌರ ಕಾರ್ಮಿಕರಿಗೆ ನೀಡುವಂತೆಯೇ ಮಾಸಿಕ 17 ಸಾವಿರ ಮಾಸಿಕ ವೇತನ ನೀಡಲು ಸರ್ಕಾರ ತೀರ್ಮಾನಿಸಿರುವುದು ಮಹತ್ವದ ತೀರ್ಮಾನವಾಗಿದೆ ಎಂದರು.
ಪೌರ ಕಾರ್ಮಿಕರ ಗುತ್ತಿಗೆ
ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ನಾಲ್ಕು ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಪೌರ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಉದ್ಘಾಟನೆ
ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಡಾ. ಪರಮೇಶ್ವರ್, ಎಚ್. ಆಂಜನೇಯ, ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮೇಯರ್ ರಾಮಚಂದ್ರಪ್ಪ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರಪ್ಪ ನಾಯ್ಡು ಮುಂತಾದವರು ಪಾಲ್ಗೊಂಡಿದ್ದರು. ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 35 ಸಾವಿರ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಇವರ ಬದುಕು ದುಸ್ಥರವಾಗಿದೆ. ಇದನ್ನು ಅರಿತು ರಾಜ್ಯ ಸರ್ಕಾರ ಮಾಸಿಕ 17 ಸಾವಿರ ವೇತನ ನೀಡಲು ನಿರ್ಧರಿಸಿರುವುದು ಇಡೀ ದೇಶದಲ್ಲಿ ಮೊದಲನೆಯದಾಗಿದೆ. ಪೌರ ಕಾರ್ಮಿಕರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದ್ದು, ಸದ್ಯದಲ್ಲೇ ಅದು ಅಸ್ತಿತ್ವಕ್ಕೆ ಬರಲಿದೆ ಎಂದರು.
Comments are closed.