ಬೆಂಗಳೂರು, ಆ. ೧೯- ರಾಜಕಾಲುವೆ ಒತ್ತುವರಿ ನೆಪದಲ್ಲಿ ಜನಸಾಮಾನ್ಯರ ಮನೆಗಳನ್ನು ನೆಲಸಮಗೊಳಿಸುತ್ತಿರುವ ಬಿಬಿಎಂಪಿ ಖುದ್ದು ತಾನೇ ಜೆಸಿ ರಸ್ತೆ, ಲಾಲ್ ಬಾಗ್ ರಸ್ತೆಗಳಲ್ಲಿ ರಾಜಕಾಲುವೆಯ ಮೇಲೆ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಭೋಗ್ಯಕ್ಕೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಕೂಗಳತೆಯಲ್ಲೇ ಇರುವ ಲಾಲ್ ಬಾಗ್ ರಸ್ತೆ ಮತ್ತು ಜೆಸಿ ರಸ್ತೆಯನ್ನು ಹಾದುಹೋಗುವ ಕೋರಮಂಗಲ ಕಣಿವೆಯ ಮೇಲೆ 33×150 ಅಡಿಯ ತಲಾ ಎರಡು ಕಟ್ಟಡಗಳನ್ನು ನಿರ್ಮಿಸಿ ಸುದೀರ್ಘ ಅವಧಿಯವರೆಗೆ ಭೋಗ್ಯಕ್ಕೆ ನೀಡಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯನ್ನು ಸೃಷ್ಟಿಸಿದೆ.
ಈ ಎರಡೂ ಕಟ್ಟಡಗಳು ರಾಜಕಾಲುವೆಯ ಮೇಲೆ ನಿರ್ಮಾಣವಾಗಿವೆ ಎಂಬುದನ್ನು ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು, ಪತ್ರಕರ್ತರನ್ನು ಎರಡೂ ಕಟ್ಟಡಗಳ ಸ್ಥಳಕ್ಕೆ ಕರೆದೊಯ್ದು, ಬಡವರ ಮನೆಗಳನ್ನು ನೆಲಸಮಗೊಳಿಸುತ್ತಿರುವ ಬಿಬಿಎಂಪಿ ತಾನೇ ರಾಜಕಾಲುವೆಯ ಮೇಲೆ ಕಟ್ಟಡ ನಿರ್ಮಿಸಿ ಜಾಣಕುರುಡಿನಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಧಾಮನಗರ ವಾರ್ಡ್‌ಗೆ ಬರುವ ಲಾಲ್ ಬಾಗ್ ರಸ್ತೆಯಲ್ಲಿ 33×120 ಅಡಿಗಳಷ್ಟು ರಾಜಕಾಲುವೆಯ ಮೇಲೆ ಬಿಬಿಎಂಪಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.
ಮೈಕಾನ್ ಸಂಸ್ಥೆಗೆ ಸುದೀರ್ಘ ಕಾಲದವರೆಗೆ ಭೋಗ್ಯ ನೀಡಿದೆ.
ಈ ಕಟ್ಟಡದಲ್ಲಿ ವಿಷ್ಣು ರೆಸಿಡೆನ್ಸಿ, ಲೆದರ್ ಇಟಾಲಿಯಾ, ಮೈಸೂರು ಇಂಡಸ್ಟ್ರಿಯಲ್ ಕಾರ್ಪೊರೇಷನ್, ಇ ಮ್ಯಾನ್ ಗಾರ್ಮೆಂಟ್ಸ್ ಅಲ್ಲದೆ, ಮೈಕಾನ್ ಸಂಸ್ಥೆಯು ಸುಮಾರು ನಾಲ್ಕಕ್ಕೂ ಹೆಚ್ಚು ಮಳಿಗೆಗಳನ್ನು ಗೋಡಾನ್‌ಗಳಾಗಿ ಮಾಡಿಕೊಂಡಿದೆ.
ಕಟ್ಟಡದ ಕೆಳಭಾಗದಲ್ಲಿ ರಾಜಕಾಲುವೆ ಇದೆ. ಇದರ ಮೇಲೆ ಬಿಬಿಎಂಪಿ ಸುಮಾರು 20 ವರ್ಷಗಳ ಹಿಂದೆ ಕಟ್ಟಡವನ್ನು ನಿರ್ಮಿಸಿದೆ. ಕಟ್ಟಡದ ಕೆಳಭಾಗದ ರಾಜಕಾಲುವೆಯು ಸುಮಾರು 40 ಕಿ.ಮೀ. ದೂರ ಸಾಗುತ್ತದೆ.
ಇಂತದ್ದೇ ಮತ್ತೊಂದು ಕಟ್ಟಡ ಜೆಸಿ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿರುವ ರಾಜಕಾಲುವೆಯ ಮೇಲೆ ನಿರ್ಮಿಸಲಾಗಿದೆ.
ಕಾರ್ಗೊ ಟಾರ್ಪಾಲಿನ್, ಎಸ್.ಎಚ್. ಏಜೆನ್ಸಿ ಕಂಪನಿಯು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು 1 ಅಡಿಗೂ ಕಡಿಮೆ ದಪ್ಪದ ಕಾಂಕ್ರೀಟ್ ಮೇಲೆ ದೊಡ್ಡ ಕಟ್ಟಡವನ್ನು ನಿರ್ಮಿಸಲಾಗಿದೆ. ನೂರಾರು ಕೆಲಸಗಾರರು ಸೇವೆ ಸಲ್ಲಿಸುತ್ತಿದ್ದು, ಈ ಕಟ್ಟಡ ಯಾವುದೇ ಹಂತದಲ್ಲಾದರೂ ಕುಸಿಯುವ ಸಾಧ್ಯತೆಗಳಿವೆ ಎಂದು ಎನ್.ಆರ್. ರಮೇಶ್ ದೂರಿದರು.
ಈಗಾಗಲೇ ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಬಡವರ ಮನೆಗಳನ್ನು ಒಡೆಯುವ ಬಿಬಿಎಂಪಿ ತಾನೇ ನಿರ್ಮಿಸಿರುವ ಈ ಕಟ್ಟಡಗಳನ್ನು ಕೆಡವಿ ಹಾಕಬೇಕು. ರಾಜಕಾಲುವೆ ಮೇಲೆ ಕಟ್ಟಡಗಳನ್ನು ನಿರ್ಮಿಸಿ ಗುತ್ತಿಗೆ ನೀಡಿರುವ ಅಂದಿನ ಆಯುಕ್ತರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
Comments are closed.