ಬೆಂಗಳೂರು, ಆ. ೧೯ – ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ಹಾಗೂ ತೊಗರಿಬೇಳೆ ವಿತರಣೆ ಮಾಡಲು ವಾರ್ಷಿಕವಾಗಿ 1800 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು.
ಬಡವರಿಗೆ 1 ಕೆಜಿ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈ ಕಾರ್ಯಕ್ರಮವನ್ನು ಎಂದಿನಿಂದ ಆರಂಭಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ವಿತರಿಸುವುದರಿಂದ ಪ್ರತಿ ತಿಂಗಳು 120 ಕೋಟಿ ರೂ. ವೆಚ್ಚವಾಗಲಿದೆ. ಅದೇ ರೀತಿ ರಿಯಾಯ್ತಿ ದರದಲ್ಲಿ ತೊಗರಿ ಬೇಳೆ ವಿತರಣೆಯಿಂದ 30 ಕೋಟಿ ರೂ. ಹೊರೆಯಾಗಲಿದ್ದು, ಪ್ರತಿ ತಿಂಗಳು 150 ಕೋಟಿ ರೂ. ವೆಚ್ಚ ತಗಲುತ್ತದೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿದಾರರಿಗೆ ತಿಳಿಸಿದರು.
ಮನೆ ಬಾಗಿಲಿಗೆ ಕೂಪನ್
ಪಡಿತರ ಕೂಪನ್‌ಗಳನ್ನು ಅಂಗಡಿಗೆ ಹೋಗಿ ಪಡೆಯಲು ಸಾಧ್ಯವಾಗದವರಿಗೆ ಮನೆ ಬಾಗಿಲಿಗೆ ಕೂಪನ್ ವಿತರಿಸಲು ನಿರ್ಧರಿಸಲಾಗಿದೆ. ಅಂಗಡಿಗೆ ಹೋಗಿ ಕೂಪನ್ ಪಡೆಯಲು ಸಾಧ್ಯವಾಗದ ಅಂಗವಿಕಲರು ಹಾಗೂ ಅಶಕ್ತರ ಪಟ್ಟಿಯನ್ನು ನೀಡುವಂತೆ ಈಗಾಗಲೇ ಎಲ್ಲಾ ಪಡಿತರ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ. ಇಂತಹವರಿಗೆ ಕೂಪನ್ ಇಲ್ಲದೆ 6 ತಿಂಗಳು ರೇಷನ್ ನೀಡುವಂತೆಯೂ ಸೂಚಿಸಿರುವುದಾಗಿ ಅವರು ಹೇಳಿದರು.
ಪಡಿತರ ಅಂಗಡಿಗಳಲ್ಲಿ ಈಗ ವಿತರಿಸುತ್ತಿರುವ ಅಡುಗೆ ಎಣ್ಣೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟದ ಪರೀಕ್ಷೆಗೂ ಸೂಚನೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ತಾಳೆಎಣ್ಣೆಯ ಬದಲಿಗೆ ಸೂರ್ಯಕಾಂತಿ ಎಣ್ಣೆಯನ್ನು ಪಡಿತರ ಚೀಟಿದಾರರು ಪಡೆಯುವ ವ್ಯವಸ್ಥೆ ಮಾಡಲಾಗುವುದು. ಆದರೆ, ಹೆಚ್ಚುವರಿಯಾಗಿ ವ್ಯತ್ಯಾಸದ ಬೆಲೆಯನ್ನು ಪಡಿತರ ಚೀಟಿದಾರರು ನೀಡಬೇಕು ಎಂದರು.
ಇದುವರೆಗೂ ಪಡಿತರ ಚೀಟಿದಾರರಿಗೆ ಸುಮಾರು 10 ಲಕ್ಷ ಕೂಪನ್‌ಗಳನ್ನು ವಿತರಿಸಲಾಗಿದ್ದು, ಶೇ. 88 ರಷ್ಟು ಪಡಿತರ ಚೀಟಿದಾರರಿಗೆ ರೇಷನ್ ಕೂಪನ್ ನೀಡಲಾಗಿದೆ ಎಂದರು.
ಪಡಿತರ ಕೂಪನ್ ಯೋಜನೆ ಶೇ. 90ರಷ್ಟು ಯಶಸ್ವಿಯಾಗಿದ್ದು, ಈ ಕೂಪನ್‌ಗಳ ಬೆಲೆಯನ್ನು 3 ರಿಂದ 6 ರೂ.ಗೆ ಹೆಚ್ಚಿಸಲಾಗುವುದು ಎಂದರು.
ಪಿಡಿಓಗೆ ಜವಾಬ್ದಾರಿ
ಬರುವ ದಿನಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸುವಾಗ ಚೀಟಿದಾರರು ಒದಗಿಸುವ ದಾಖಲೆಗಳನ್ನು ಪರಿಶೀಲಿಸಿ ಚೀಟಿಗಳನ್ನು ವಿತರಿಸುವಂತೆ ಶಿಫಾರಸು ಮಾಡುವ ಅಧಿಕಾರವನ್ನು ಆಹಾರ ಇನ್ಸ್‌ಪೆಕ್ಟರ್‌ಗಳ ಬದಲಿಗೆ ಗ್ರಾಮೀಣ ಭಾಗಗಳಲ್ಲಿ ಪಿಡಿಓಗಳಿಗೆ ನಗರ ಪ್ರದೇಶಗಳಲ್ಲಿ ರೆವೆನ್ಯೂ ಇನ್ಸ್‌ಪೆಕ್ಟರ್ ಅಥವಾ ಹೆಲ್ತ್ ಇನ್ಸ್‌ಪೆಕ್ಟರ್‌ಗಳಿಗೆ ಜವಾಬ್ದಾರಿ ನೀಡುವ ಚಿಂತನೆ ಇದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಿರುವುದಾಗಿ ಸಚಿವ ಯು.ಟಿ. ಖಾದರ್ ತಿಳಿಸಿದರು.
Comments are closed.