ಕರ್ನಾಟಕ

ಒಂದು ಕೊಲೆಯ ಆಳದಲ್ಲಿ ಹತ್ತಾರು ಬೇರು

Pinterest LinkedIn Tumblr

Murderಆತ್ಮಹತ್ಯೆ ಎನ್ನುವುದು ಒಂದು ಘಟನೆ. ಒಂದೊಂದು ಘಟನೆಯ ಹಿಂದೆ ವಿವಿಧ ಆಯಾಮಗಳಿದ್ದೇ ಇರುತ್ತವೆ. ಡಿವೈಎಸ್ಪಿ ಗಣಪತಿ, ಕಲ್ಲಪ್ಪಹಂಡೀಭಾಗ್‌ ಅವರ ಆತ್ಮಹತ್ಯೆ, ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ, ಮಲ್ಲಿಕಾರ್ಜುನ ಬಂಡೆಯವರ ಹತ್ಯೆ, ಬೆಂಗಳೂರಿನ ಎಸ್‌ಐ ಜಗದೀಶ್‌ ಅವರಿಗೆ ರೌಡಿಗಳು ಚೂರಿ ಹಾಕಿ ಕೊಂದ ಘಟನೆ- ಇಂಥವು ನಡೆದಾಕ್ಷಣ ಹಲವು ಊಹಾಪೋಹಗಳು ಕೇಳಿಬರುತ್ತವೆ. ಅನಂತರ ಅಷ್ಟೇ ವೇಗವಾಗಿ ಮಾಸಿಹೋಗುತ್ತವೆ. ಕೆಲವು ಕೊಲೆ, ಹತ್ಯೆ ಪ್ರಕರಣಗಳು ಮಾಧ್ಯಮಗಳಲ್ಲಿ ವಿಜೃಂಭಿಸಿದರೆ ಇನ್ನು ಕೆಲವು ಸುದ್ದಿಯಾಗುವುದೇ ಇಲ್ಲ. ಉದಾಹರಣೆಗೆ ಹೆಸರಾಂತ ಸಸ್ಯಶಾಸ್ತ್ರಜ್ಞ, ಪರಿಸರವಾದಿ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಅವರ ಪುತ್ರ ಪಳ್ಳತ್ತಡ್ಕ ಕುಮಾರ ಪ್ರಸಾದ್‌ ಅವರನ್ನು ಒಂದೂವರೆ ತಿಂಗಳ ಹಿಂದೆ ವೆನಿಜುವೆಲಾದಲ್ಲಿ ಕೊಲೆ
ಮಾಡಲಾಯಿತೆನ್ನುವುದು ಒಂದು ದಿನದ ಸಣ್ಣ ಸುದ್ದಿಯಾಗಿ ಮುಗಿಯಿತು. ಆ ಕಳೇಬರ ಊರಿಗೆ ಬಂತೋ? ಅಲ್ಲಿಯೇ
ಅಂತಿಮ ಸಂಸ್ಕಾರವಾಯಿತೋ ಎನ್ನುವುದೂ ಸುದ್ದಿಯಾಗಲಿಲ್ಲ. ಒಂದೊಂದೂ ಘಟನೆಗಳ ಹಿಂದೆ ಸಮಾಜದಲ್ಲಿ ಆಳವಾದ ನಾನಾ ತರಹದ ಬೇರುಗಳು ಕಂಡುಬರುತ್ತದೆ.

ಮಾಜಿ ಕ್ರಿಮಿನಲ್‌ ಮಾಡೆಲ್‌!
ಎಷ್ಟೋ ಮಂದಿ ಕ್ರಿಮಿನಲ್‌ಗ‌ಳು ದಶಕಗಳ ಬಳಿಕ ನ್ಯಾಯಾಲಯದಿಂದ ಖುಲಾಸೆಗೊಂಡು ಸಮಾಜದಲ್ಲಿ
ಅತಿಗಣ್ಯರಾಗಿ, ಕೆಲವು ಬಾರಿ ರಾಜಕಾರಣಿಗಳಾಗಿ, ಜನಪ್ರತಿನಿಧಿಗಳಾಗಿ ಮೆರೆಯುವುದನ್ನು ಕಂಡಿದ್ದೇವೆ. ಇದೇ
ಹಲವು ಬಾರಿ ಯುವಜನಾಂಗವನ್ನು ಸೆಳೆಯುವ ಅಪಾಯವೂ ಇದೆ. ಇಂಥ ಬೆಳವಣಿಗೆ ಸಮಾಜಕ್ಕೂ, ಪೊಲೀಸ್‌ ಇಲಾಖೆಗೂ ಶ್ರೇಯಸ್ಕರವಲ್ಲ. ಒಂದಷ್ಟು ಮಂದಿ ಇಂಥವರೇ ಸೇರಿ ಸಂಘಟನೆ ಕಟ್ಟಿಕೊಂಡು, ಆ ಮೂಲಕ ಅಕ್ರಮ ಹಣವನ್ನು ಖರ್ಚು ಮಾಡುತ್ತಾ, ಸಾಮಾಜಿಕ ಒಪ್ಪಿಗೆ ಪಡೆದು, ದೊಡ್ಡ ವ್ಯಕ್ತಿಗಳಾಗಿ ವಿಜೃಂಭಿಸುವುದು ಒಂದು ಬಗೆಯಲ್ಲಿ ಸರಕಾರದ ಅಕ್ರಮ ಸಕ್ರಮದ ಯೋಜನೆಯಂತೆಯೇ. ಇದಕ್ಕೆ ಸಮಾಜವೇ ಬುದ್ಧಿ ಹೇಳಬೇಕು.

ಇಂಥ ಲೆಕ್ಕಾಚಾರದ ಮನುಷ್ಯರ ವಿರುದ್ಧ ಜಾಗೃತಿ ಮೂಡಿಸಬೇಕು, ಜನರಲ್ಲೂ ಮೂಡಬೇಕು. ಅಧಿಕಾರ ಪಡೆಯಲು ಹಣವೇ ಪ್ರಧಾನವೆಂಬುದನ್ನು ಸುಳ್ಳಾಗಿಸಬೇಕು. ಈ ದೃಷ್ಟಿಯಲ್ಲಿ ಮೇಲ್ಮಟ್ಟದ ಸಚಿವರು, ಹಿರಿಯ ಅಧಿಕಾರಿಗಳು
ಗಮನಹರಿಸಬೇಕಾದ ಅಂಶ ಬಹಳಷ್ಟಿದೆ. ಅವರು ತಮ್ಮ ಅಧೀನ ಸಿಬ್ಬಂದಿಗೆ ಜಾಗೃತಿ ಮೂಡಿಸುವುದು ಅಗತ್ಯ. ಉಡುಪಿಯಲ್ಲಿ ಎಸ್ಪಿಯಾಗಿದ್ದ ಅಣ್ಣಾಮಲೈರಂಥ ಅಧಿಕಾರಿಗಳ ನಡವಳಿಕೆ ಇತರ ಅಧಿಕಾರಿಗಳಿಗೂ ಹರಡಬೇಕು. ಇನ್ನು ಸಚಿವರು, ಹಿರಿಯ ಅಧಿಕಾರಿಗಳೇ ಆರೋಪಿ ಸ್ಥಾನದಲ್ಲಿ ನಿಂತಾಗ ಜನರು ಅಸಹಾಯಕ. ಇಡೀ ವ್ಯವಸ್ಥೆಯನ್ನು ದುರಸ್ತಿ ಮಾಡಲು ಹೋಗಿ ಕೊನೆಗೆ ಏನೂ ಮಾಡಲಾಗದೆಂಬ ಹತಾಶೆ ದಕ್ಷ ಅಧಿಕಾರಿಗಳಿಗೆ ಮೂಡಿದರೆ ದುರಂತ. ಆರಂಭದಲ್ಲಿ ಕಟ್ಟುನಿಟ್ಟಿನ ಅಧಿಕಾರಿಗಳಾಗಿ ಅನಂತರ ವ್ಯವಸ್ಥೆ ಬದಲಾಯಿಸಲಾಗದೇ ರಾಜಿಯಾದ ಎಷ್ಟೋ
“ದಕ್ಷಪ್ರಜಾಪತಿಗಳು’ ಇದ್ದಾರೆ ಎನ್ನುವುದು ಸಂತಸ ಪಡುವ ಸಂಗತಿಯಲ್ಲ.

ಹಣ ಗಳಿಕೆಯ ಹೆದ್ದಾರಿ
ಇನ್ನು ಹಣದ ಪ್ರಭಾವ ಯಾವ ನೆಲೆಯಲ್ಲಿ ನಮ್ಮನ್ನು ಮತ್ತು ಸಮಾಜವನ್ನು ಅಧಃಪತನಕ್ಕೆ ಒಯ್ಯುತ್ತಿದೆ ಎಂಬುದು ಹೇಳಿ ಮುಗಿಯುವಂಥದ್ದಲ್ಲ. ದೇಶದ ಸಂಪತ್ತಾಗಬೇಕಾದ ವಿದ್ಯಾವಂತರು ಉಗ್ರಗಾಮಿಗಳು, ಕ್ರಿಮಿನಲ್‌ಗ‌ಳಾಗುತ್ತಿದ್ದಾರೆ. ಹಣ ಸಂಪಾದನೆಗೂ ನೈತಿಕತೆಗೂ ಸಂಬಂಧವಿಲ್ಲ ಎಂಬ ಸ್ಥಿತಿ ಸಹ್ಯವಂತೂ ಅಲ್ಲ.

ಕೌಟುಂಬಿಕ ಸಂಬಂಧಗಳು
ಭಾರೀ ಸುದ್ದಿಯ ಅಪರಾಧ ಪ್ರಕರಣಗಳಲ್ಲಿ ದಂಪತಿ ನಡುವೆ ವಿರಸಗಳಿದ್ದವು ಎನ್ನುತ್ತವೆ ವರದಿಗಳು. ಈ ಕಾಲದಲ್ಲಿ ಹೆಚ್ಚು ಸಹಜ ಯಾವುದೋ ಒಂದು ಕಾಲದಲ್ಲಿ ಏನೂ ಗೊತ್ತಿಲ್ಲದ ಮಹಿಳೆಯರು, ಇಂದು ಎಲ್ಲವನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಇಂದು ಹೆಚ್ಚುತ್ತಿರುವ ವಿವಾಹ ವಿಚ್ಛೇದನ ಪ್ರಕರಣಗಳು ಇದಕ್ಕೆ ಪೂರಕ ಸಾಕ್ಷಿ. ಇದಕ್ಕೆ ಕೇವಲ ಹಣಕಾಸು ಸಂಬಂಧಗಳು ಮಾತ್ರ ಕಾರಣವಲ್ಲ.

ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ವಿಚ್ಛೇದನವಾಗುವುದಕ್ಕೆ ಹಣಕಾಸು ಕಾರಣವೆಂದು ಹೇಗೆ ಹೇಳುವುದು? ಮುಖ್ಯವಾಗಿ ಪುರುಷರು ಇಂದು ಅನೇಕ ಬಗೆಯ ದುಶ್ಚಟಗಳಿಗೆ ದಾಸರಾಗಿ ತಮ್ಮ ಶಾರೀರಿಕ ಸಾಮರ್ಥ್ಯವನ್ನು ಕುಗ್ಗಿಸಿಕೊಂಡಿರುವುದು ನಿಚ್ಚಳ. ಸ್ತ್ರೀ ಸಮಾಜ ಅಷ್ಟೊಂದು ಪ್ರಮಾಣದಲ್ಲಿ ಕಲುಷಿತಗೊಂಡಿಲ್ಲ. ಅಕ್ರಮ ಸಂಪತ್ತಿಗೂ ದುಶ್ಚಟಗಳಿಗೂ ಬಹಳ ಹತ್ತಿರದ ಸಂಬಂಧವಿದೆ. ಅಕ್ರಮ ಸಂಪತ್ತು ಸಂಗ್ರಹಿಸಲು ಒಂದಿಷ್ಟು ಶಕ್ತಿ ವ್ಯಯ, ಅದರಿಂದಲೇ ದುಶ್ಚಟ ತಗುಲಿ ಮತ್ತೆ ದೈಹಿಕ ಶಕ್ತಿಯ ವ್ಯಯ. ಇಂಥದ್ದಕ್ಕೆ ಇಡೀ ಸಮಾಜ ಬೆಲೆ ತೆರಬೇಕಾಗಿದೆ. ವ್ಯಕ್ತಿ ತನ್ನ ದೌರ್ಬಲ್ಯದಿಂದ ಎಷ್ಟು ಬೇಗ ಹೊರಬರುತ್ತಾನೋ ಅಷ್ಟು ಅವನಿಗೂ ಸುತ್ತಲಿನವರಿಗೂ ನೆಮ್ಮದಿ. ಪತಿ, ಪತ್ನಿ ವಿರಸ ಸಹಜವಾದರೂ ಸಂಯಮ ಬಹಳ ಮುಖ್ಯ. ಸಮಾಜದಲ್ಲಿ ಹಣಕಾಸಿಗೆ ನಾವು ಕೊಡುತ್ತಿರುವ ಮನ್ನಣೆ ಕೆಲವು ವೇಳೆ ಅತಿರೇಕಕ್ಕೆ ಕಾರಣವಾಗುತ್ತಿದೆ. ಹಣಕಾಸಿನ ತಗಾದೆಗಳಿದ್ದರೆ ಕಾನೂನು ಪ್ರಕಾರ ವಿಲೇವಾರಿ ಮಾಡಿಕೊಳ್ಳುವುದು ಎಲ್ಲರಿಗೂ ಶ್ರೇಯಸ್ಕರ.

ಟೀವಿ ವೀಕ್ಷಣೆಗೆ ಮಿತಿ ಯಾರಿಂದ?
ಕೊಲೆ ಪ್ರಕರಣಗಳಲ್ಲಿ ಆರೋಪಿಗಳು ಟೀವಿ ಸೀರಿಯಲ್‌ ಗಳಿಂದ ಪ್ರಚೋದಿತರಾದರು ಎಂಬ ಮಾತು ಕೇಳುತ್ತೇವೆ.
ಕೊಲೆಯಂತಹ ಸನ್ನಿವೇಶಗಳನ್ನು ಪೋಷಕರು ಸಹಿತ ಮಕ್ಕಳು ನೋಡುವಾಗ ಮುಜುಗರ ಅನ್ನಿಸದೇ ಇರುವಷ್ಟು ಇಂದ್ರಿಯಗಳು ನಿಷ್ಕ್ರಿಯಗೊಂಡಿವೆ. ಕೊಲೆ, ರಕ್ತಪಾತಕ್ಕೆ ಹಿಂದೆ ಸ್ವಯಂ ಅನುಭವ ಬೇಕಿತ್ತಾದರೆ ಈಗ ಕೆಲವು ಸೀರಿಯಲ್‌ಗ‌ಳು ಸಾಕು, ಆ ಮಟ್ಟದಲ್ಲಿ ಮನಸ್ಸನ್ನು ಸಿದ್ಧಗೊಳಿಸುತ್ತಿವೆ. ಇವೆಲ್ಲವೂ ಉಂಟುಮಾಡುವ ಒಟ್ಟೂ ಅಪಾಯವನ್ನು ಮನಗಾಣುವ ಹೊತ್ತಿದು. ಚಿಕ್ಕ ಮಕ್ಕಳಿಗೆ ಟಚ್‌ ಸ್ಕ್ರೀನ್‌ ಮೊಬೈಲ್‌, ಬೇಡವಾದ ಮಾಹಿತಿ ಪೂರೈಸುವ ಇಂಟರ್‌ನೆಟ್‌ ಸಂಪರ್ಕದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಮಕ್ಕಳಿಗಾಗಿ ಎಷ್ಟು ಖರ್ಚು ಮಾಡುತ್ತಿದ್ದಾರೋ ಅದರ ಶೇ.1 ಪ್ರಯತ್ನ/ ಖರ್ಚು ಅವರಿಗೆ ನೈತಿಕ ಜೀವನ ಕಲಿಸುವುದಕ್ಕೆ ಕೊಡುತ್ತಿಲ್ಲವೆಂಬುದು
ಒಪ್ಪಿಕೊಳ್ಳಲೇಬೇಕಾದ ಸಂಗತಿ

ಮಕ್ಕಳನ್ನು ಬೆಳೆಸುವ ಪರಿ
ಎಲ್ಲ ಪೋಷಕರೂ ಗಂಭೀರವಾಗಿ ಎಚ್ಚರ ವಹಿಸಬೇಕಾಗಿದೆ. ಹಣ ಕೊಟ್ಟುಬಿಟ್ಟರೆ ನನ್ನ ಜವಾಬ್ದಾರಿ ಮುಗಿಯಿತು ಎಂದು ಯೋಚಿಸುವಂತಿಲ್ಲ. ಮಕ್ಕಳ ನಿಗಾ ಕುರಿತು ಸಮಯ ಕೊಡಬೇಕು.

ಮಗನೇ ತಂದೆಯನ್ನು ಕೊಲ್ಲುತ್ತಾನೆಂದರೆ ನಂಬಲಾಗದು. ಹಾಗೆಂದು ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ ಎಂದು ಆಲೋಚಿಸಿದ್ದೇವೆಯೇ? ಈಗ ಹಿಂದಿನಂತಲ್ಲ, ಒಂದೆರಡು ಮಕ್ಕಳಿದ್ದರೆ ಜಾಸ್ತಿ. ಅವರು ತಪ್ಪು ಮಾಡಿದರೂ ತಂದೆ-ತಾಯಿ ತಪ್ಪೆಂದು ಹೇಳುವುದಿಲ್ಲ, ಹೇಳಲು ಒಂದು ಬಗೆಯ ಭಯ. ಮಗ ಓಡಿ ಹೋದರೆ, ಪ್ರಾಣಕ್ಕೆ ಅಪಾಯ ತಂದುಕೊಂಡರೆ ಎಂಬ ಅವ್ಯಕ್ತ ಭಯ. ಶಿಕ್ಷಕರು ಶಿಕ್ಷೆ ಕೊಡುವಂತಿಲ್ಲ. ಇದಕ್ಕೆ ಮುಖ್ಯ ಕಾರಣ ಎರಡು. ಶಿಕ್ಷೆ ಕೊಟ್ಟರೆ ಎಲ್ಲಿ ಮಕ್ಕಳು ಶಾಲೆ ಬಿಟ್ಟು ಇನ್ನೊಂದು ಶಾಲೆಗೆ ಹೋಗುತ್ತಾರೋ ಎಂಬ ವ್ಯಾವಹಾರಿಕ ಲೆಕ್ಕಾಚಾರ ಒಂದೆಡೆ, ತಂದೆ-ತಾಯಿಗಳು ಶಿಕ್ಷಕರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆಂಬ ಭಯ ಇನ್ನೊಂದೆಡೆ. ಚಿಕ್ಕಪ್ರಾಯದಲ್ಲಿ ತಪ್ಪೆಸಗಿದರೆ ಶಿಕ್ಷಿಸುವ ಹಕ್ಕು ಶಿಕ್ಷಕರಿಗೆ ಇಲ್ಲವಾದರೆ ಆ ಮಕ್ಕಳು ಮುಂದೊಂದು ದಿನ ಗಂಡಾಂತರ ಮಾಡುತ್ತಾರೆ ಎಂಬ ಎಚ್ಚರ ಅಗತ್ಯ. ತಪ್ಪೆಸಗಿದಾಗ ಕೊಡುವ ಶಿಕ್ಷೆಯನ್ನು ಮಾನವ ಹಕ್ಕು, ಮಕ್ಕಳ ಹಕ್ಕು ಇತ್ಯಾದಿ ಶಬ್ದಾಲಂಕಾರಗಳಿಂದ ನೋಡುವುದು ಕ್ಷೇಮವಲ್ಲ.

ಸಿರಿವಂತಿಕೆ ಪ್ರದರ್ಶನಕ್ಕೆ ಗಾಂಧಿ-ವಾದ
ಈ ಸಂದರ್ಭದಲ್ಲಿ ಗಾಂಧೀಜಿಯವರ ಮಾತನ್ನು ನೆನಪು ಮಾಡಿಕೊಳ್ಳುವುದು ಸೂಕ್ತ. ಸಮಾಜದಲ್ಲಿ ಯಾವತ್ತೂ ಸಿರಿವಂತರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಇವರ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಲೂ ಇರುತ್ತದೆ. ಇವುಗಳಲ್ಲಿ ಅನೈತಿಕ ಮಾರ್ಗದ ಸಿರಿವಂತಿಕೆ ಇರುವುದೂ ಗುಟ್ಟಲ್ಲ. ದುಡ್ಡಿದ್ದಾಗ ಎಲ್ಲಾ ಮಾನ ಸಮ್ಮಾನಗಳು ಅರಸಿ ಬರುತ್ತವೆ. ಇದನ್ನು ನೋಡಿ ತಾವೂ ಏಕೆ ಅಕ್ರಮ ಮಾರ್ಗದಲ್ಲಿ ಸಿರಿವಂತರಾಗಬಾರದು ಎಂಬ ಚಿಂತನೆ ಇನ್ನಷ್ಟು ಮಂದಿಯಲ್ಲಿ ಮೂಡಬಹುದು. ಅಕ್ರಮ ಸಂಪತ್ತಿಗೆ ಸಮಾಜ ಭಾರೀ ಬೆಲೆ ತೆರಬೇಕಾಗುತ್ತದೆ.ಇದಕ್ಕಾಗಿಯೇ ಗಾಂಧೀಜಿ ಉಡುಪಿಯಲ್ಲಿ 1934 ಫೆಬ್ರವರಿ 25ರಂದು ದಲಿತೋದ್ಧಾರಕ್ಕಾಗಿ ಪಾಂಗಾಳ ನಾಯಕ್‌ ಕುಟುಂಬದ 12 ವರ್ಷದ ಬಾಲಕಿ ನಿರುಪಮಾ ಚಿನ್ನವನ್ನು ಸಮರ್ಪಿಸಿದಾಗ ಹೇಳಿದ ಮಾತು: “ಸಂಪತ್ತನ್ನು ಪ್ರದರ್ಶಿಸಬಾರದು. ಅಗತ್ಯದಷ್ಟೇ ಆಭರಣ ಧರಿಸಬೇಕು. ಇದು ಬಡದೇಶ. ಬೇರೆಯವರು ಕೊರಗುವಂತಾಗಬಾರದು.’ ಪ್ರಸ್ತುತ ನಾವೋ, ಮುಂದಿನ ಪೀಳಿಗೆಗೆಂದಿರುವ ನೈಸರ್ಗಿಕ ಸಂಪತ್ತನ್ನೂ ಕೊಳ್ಳೆಹೊಡೆಯುತ್ತಿದ್ದೇವೆ.

ಹಣವನ್ನೂ ಕೊಳ್ಳುಬಾಕತನದ ಸಂತೃಪ್ತಿಗಾಗಿ ಸಂಗ್ರಹಿಸುತ್ತಿದ್ದೇವೆ. ಇದೆಲ್ಲದರ ಪರಿಣಾಮ ಸಮಾಜದಲ್ಲಿ ಇಂಥ ಘಟನೆಗಳು ಹೆಚ್ಚು ಹೆಚ್ಚು ನಡೆದು ಅರಾಜಕತೆ ನೆಲೆಗೊಳ್ಳುತ್ತದೆ. ಈಗ ಬಿತ್ತುತ್ತಿರುವುದೆಲ್ಲಾ ಅದರ ಬೀಜಗಳು ಎಂಬ ಎಚ್ಚರವಿರಲಿ. ಏಕೆಂದರೆ ನೈತಿಕತೆ ಚೌಕಟ್ಟು ಇರದಿದ್ದರೆ ಅರಾಜಕತೆಗೆ ಬೇಲಿ ಯಾವುದು?

*ಮಟಪಾಡಿ ಕುಮಾರಸ್ವಾಮಿ

=ಉದಯವಾಣಿ

Comments are closed.