ಕರಾವಳಿ

ಚೀಟಿ ವ್ಯವಹಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಂಗನಾಮ :ರಾತ್ರೋರಾತ್ರಿ ಪರಾರಿಯಾದ ದಂಪತಿ

Pinterest LinkedIn Tumblr

Cheating_Case

ಬೆಂಗಳೂರು: ಚೀಟಿ ವ್ಯವಹಾರದ ಹೆಸರಿನಲ್ಲಿ ಅಮೃತಹಳ್ಳಿ ನಿವಾಸಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ದಂಪತಿ, ಮನೆಯಲ್ಲಿ ತಿರುಪತಿ ತಿಮ್ಮಪ್ಪನ ಫೋಟೊ ಒಂದನ್ನು ಬಿಟ್ಟು ಉಳಿದೆಲ್ಲ ಸಾಮಾನುಗಳ ಜತೆ ರಾತ್ರೋರಾತ್ರಿ ಪರಾರಿಯಾಗಿದ್ದಾರೆ.

ತಿರುಪತಿಗೆ ಹೋಗಿ ಬರುವುದಾಗಿ ಮಕ್ಕಳ ಜತೆ ತೆರಳಿದ ದಂಪತಿ, ಹತ್ತು ದಿನಗಳಾದರೂ ನಗರಕ್ಕೆ ವಾಪಸಾಗಿಲ್ಲ. ಅವರ ಮೊಬೈಲ್ಗಳು ಸಹ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಸ್ಥಳೀಯರು, ಬೀಗ ಮುರಿದು ಮನೆಯೊಳಗೆ ಹೋದಾಗ ಪತ್ತೆಯಾಗಿದ್ದು ತಿರುಪತಿ ತಿಮ್ಮಪ್ಪನ ಫೋಟೊ ಮಾತ್ರ!ತಾವು ಮೋಸ ಹೋಗಿರುವುದನ್ನು ಅರಿತ ನೂರಕ್ಕೂ ಹೆಚ್ಚು ಮಂದಿ ಇದೀಗ, ‘ನಮ್ಮ ಹಣ ಕೊಡಿಸಿ’ ಎಂದು ಅಮೃತಹಳ್ಳಿ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡವೂ ರಚನೆಯಾಗಿದೆ.

ಬೋಗಸ್ ಸ್ಕೀಮ್: ‘ಅಮೃತಹಳ್ಳಿ ನಿವಾಸಿ ರಮೇಶ್ ಹಾಗೂ ಅವರ ಪತ್ನಿ ರೇವತಿ, ಐದು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ರೇಷ್ಮೆ ಸೀರೆ ಉಡುಗೊರೆ ಕೊಡುವ ಸ್ಕೀಮ್ ಪರಿಚಯಿಸಿದ್ದರು. ಸುಮಾರು 500 ಮಂದಿಯಿಂದ ಪ್ರತಿ ತಿಂಗಳು ತಲಾ 3,600 ರಿಂದ 6,500 ಚೀಟಿಕಟ್ಟಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

3,600 ಕಟ್ಟಿದವರಿಗೆ 4,500 ಸಾವಿರ ಮೌಲ್ಯದ ರೇಷ್ಮೆ ಸೀರೆ ಹಾಗೂ 6,500 ಚೀಟಿ ಕಟ್ಟಿದವರಿಗೆ 7,500 ಮೌಲ್ಯದ ಸೀರೆಯನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಕೊಡುವುದಾಗಿ ಹೇಳಿದ್ದರು’ ಎಂದು ವಂಚನೆಗೊಳಗಾದವರು ದೂರಿನಲ್ಲಿ ಹೇಳಿದ್ದಾರೆ.

15 ಕೋಟಿ ವಂಚನೆ: ‘ಐದು ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಈ ದಂಪತಿಯ ವಿಲಾಸಿ ಜೀವನಶೈಲಿ ನೋಡಿ ಚೀಟಿ ಹಾಕಿದ್ದೆವು. ಚೀಟಿ ಕೂಗಿದವರಿಗೆ ನಿವೇಶನ ಕೊಳ್ಳುವಾಗ ಹೆಚ್ಚಿನ ಹಣ ಹಾಕಿ ಕೊಡುವುದಾಗಿ ನಂಬಿಸಿದ್ದರು. ಆದರೆ, ಈವರೆಗೆ ಯಾರೊಬ್ಬರಿಗೂ ಅವರು ಹಣ ಕೊಟ್ಟಿಲ್ಲ. ಸುಮಾರು ₹15 ಕೋಟಿ ಸಂಗ್ರಹಿಸಿ ಕಾಲ್ಕಿತ್ತಿದ್ದಾರೆ’ ಎಂದು ದೂರಿದ್ದಾರೆ.

ಸಂಚು ರೂಪಿಸಿ ಪರಾರಿ: ‘ಸ್ಥಳೀಯರಿಗೆ ವಂಚಿಸಿದ ಬಳಿಕ ಅಮೃತಹಳ್ಳಿ ತ್ಯಜಿಸಲು ದಂಪತಿ ಮೊದಲೇ ಸಂಚು ರೂಪಿಸಿದಂತಿದೆ. ಹೀಗಾಗಿ, ಕೆಲ ದಿನಗಳಿಂದ ಅವರು ಮನೆ ಸಾಮಾನುಗಳನ್ನು ಒಂದೊಂದಾಗಿ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಅಲ್ಲದೆ, ತರಗತಿ ಪ್ರಾರಂಭವಾದರೂ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ. ‘ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಬರುತ್ತೇವೆ’ ಎಂದು ಸ್ಥಳೀಯರಿಗೆ ತಿಳಿಸಿ, ಜುಲೈ 19ರ ರಾತ್ರಿ ತಮ್ಮ ಕಾರಿನಲ್ಲಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ವಿವಾಹ ನಿಶ್ಚಯವಾಗಿದ್ದರಿಂದ ಕಳೆದ ತಿಂಗಳು ಚೀಟಿ ಕೂಗಿದ್ದೆ. ಆದರೆ, ಹಣ ಕೊಡದೆ ಮೋಸ ಮಾಡಿದ್ದಾರೆ. ಈಗ ಮದುವೆ ನಿಂತು ಹೋಗುವ ಆತಂಕ ಎದುರಾಗಿದೆ’ ಎಂದು ಮಹಿಳೆಯೊಬ್ಬರು ಪೊಲೀಸರ ಬಳಿ ನೋವು ತೋಡಿಕೊಂಡಿದ್ದಾರೆ.

‘ಚೀಟಿ ಕೂಗಿದ 20ಕ್ಕೂ ಹೆಚ್ಚು ಮಂದಿಗೆ ದಂಪತಿ ವಿಜಯನಗರ ಬ್ಯಾಂಕ್ ಚೆಕ್ ನೀಡಿದ್ದಾರೆ. ಅವರ ಹೆಸರುಗಳಲ್ಲಿರುವ ಖಾತೆಯಲ್ಲಿ ಕೇವಲ ₹ 700 ಇದೆ. ಇವರ ಬಗ್ಗೆ ಸುಳಿವು ಸಿಕ್ಕವರು ಹಾಗೂ ಇವರಿಂದ ವಂಚನೆಗೆ ಒಳಗಾದವರು ಅಮೃತಹಳ್ಳಿ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಠಾಣೆಯ ದೂರವಾಣಿ ಸಂಖ್ಯೆ 280-2294-3644 .

ಮನೆಯೂ ಮಾರಾಟ?

‘ಮೂಲತಃ ಶ್ರೀರಾಂಪುರ ನಿವಾಸಿಯಾದ ರಮೇಶ್, ಮೊದಲು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕೋಳಿ ಅಂಗಡಿ ಪ್ರಾರಂಭಿಸಿ, ನಷ್ಟ ಅನುಭವಿಸಿದರು. ಕೊನೆಗೆ ಚೀಟಿ ವ್ಯವಹಾರಕ್ಕೆ ಕೈ ಹಾಕಿದ್ದ ಅವರು, ಅದೇ ಹಣದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಈಗ ಅವರು ವಾಸವಿದ್ದ ಅಮೃತಹಳ್ಳಿಯ ಮನೆಯನ್ನೂ ಸಹಕಾರನಗರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಚಾರಣೆ ಪ್ರಗತಿಯಲ್ಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚೀಟಿಯಲ್ಲಿ ವಿವಿಧ ಯೋಜನೆಗಳನ್ನು ಪರಿಚಯಿಸಿ ವಂಚನೆ ಮಾಡಿರುವುದಾಗಿ ದೂರು ಬಂದಿದೆ. ಚಿಟ್ ಫಂಡ್ ಕಾಯ್ದೆ, ವಂಚನೆ (ಐಪಿಸಿ 420) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ- ಪಿ.ಎಸ್.ಹರ್ಷ ಡಿಸಿಪಿ, ಈಶಾನ್ಯ ವಿಭಾಗ

ವರದಿ ಕೃಪೆ : ಪ್ರಜಾವಾಣಿ

Comments are closed.