
ಬೆಂಗಳೂರು: ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಇಂದಿನ ಕರ್ನಾಟಕ ಬಂದ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಂದ್ ಬಹುತೇಕ ಯಶಸ್ವಿಯಾಗಿದೆ.
ರಸ್ತೆತಡೆ, ರೈಲುತಡೆ, ರಾಜಭವನ ಮುತ್ತಿಗೆ, ವಿಮಾನ ನಿಲ್ದಾಣ ಮುತ್ತಿಗೆ, ರಸ್ತೆಗಳಲ್ಲಿ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆಗಳನ್ನು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿದ್ದು, ಸಾರ್ವಜನಿಕ ಆಸ್ತಿ- ಪಾಸ್ತಿಗಳಿಗೆ ಹಾನಿ ಮಾಡಿದ ಘಟನೆಗಳು ವರದಿಯಾಗಿಲ್ಲ.
ರಾಜ್ಯ ರಸ್ತೆ ಸಾರಿಗೆ ಬಸ್ ಸೇರಿದಂತೆ ಯಾವುದೇ ಖಾಸಗಿ ಬಸ್ಗಳು, ಆಟೋ, ಮಾಕ್ಸಿಕ್ಯಾಬ್ಗಳ ಓಡಾಟ ಸ್ಥಗಿತಗೊಂಡಿದ್ದು, ಸಾಮಾನ್ಯ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಅಂಗಡಿ ಮುಂಗಟ್ಟುಗಳು, ಚಿತ್ರ ಮಂದಿರಗಳು ಸೇರಿದಂತೆ ವಾಣಿಜ್ಯ ಕೇಂದ್ರಗಳು ಬಾಗಿಲು ಹಾಕಿವೆ.
ರಾಜಧಾನಿ ಸ್ತಬ್ಧ
ಕರ್ನಾಟಕ ಬಂದ್ಗೆ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಾಹನ ಸಂಚಾರ ವಿರಳವಾಗಿದ್ದು, ಆಡಳಿತ ಶಕ್ತಿ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಕಡಿಮೆ ಇದೆ. ಮೆಟ್ರೋ ರೈಲು ಸಂಚಾರ ಸಹ ಸ್ಥಗಿತಗೊಂಡಿದೆ. ಸಾರಿಗೆ ಸೌಕರ್ಯವಿಲ್ಲದೆ ತುರ್ತು ಕೆಲಸಗಳಿಗೆ ತೆರಳುವ ಸಾರ್ವಜನಿಕರು ಪರದಾಡುವಂತಾಗಿದೆ.
ಮಹದಾಯಿ ತೀರ್ಪು ವಿರೋಧಿಸಿ ನಗರದ ಹಲವೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಚಿತ್ರೋದ್ಯಮ ಸಹ ಬಂದ್ಗೆ ಬೆಂಬಲ ನೀಡಿದ್ದು, ಚಿತ್ರಮಂದಿರಗಳು ಬಂದ್ ಆಗಿವೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜಭವನ ಹಾಗೂ ವಿಮಾನ ನಿಲ್ದಾಣಗಳ ಮುತ್ತಿಗೆ ಹಾಕಿ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದರು.
ಸಂಸದರ ನೇಣು
ಕನ್ನಡ ಚಳುವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ್ ನಾರಾಯಣ್ ನೇತೃತ್ವದಲ್ಲಿ ಸಂಸದರ ಪ್ರತಿಕೃತಿಗಳನ್ನು ನೇಣಿಗೆ ಏರಿಸಿ ಪ್ರತಿಭಟಿಸಲಾಯಿತು.
ಮೈಸೂರು, ಚಾಮರಾಜನಗರ ಬಂದ್
ಕರ್ನಾಟಕ ಬಂದ್ಗೆ ಮೈಸೂರು, ಚಾಮರಾಜನಗರಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಈ ಎರಡು ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಮಂಡ್ಯ, ಹಾಸನದಲ್ಲೂ ಬಂದ್ ಯಶಸ್ವಿಯಾಗಿದೆ.
ತುಮಕೂರು ವರದಿ
ಕರ್ನಾಟಕ ಬಂದ್ಗೆ ತುಮಕೂರಿನಲ್ಲೂ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತುಮಕೂರು, ತುರುವೇಕೆರೆ, ತಿಪಟೂರು, ಗುಬ್ಬಿ, ಕುಣಿಗಲ್, ಕೊರಟಗೆರೆ, ಮಧುಗಿರಿ, ಸಿರಾ ಹಾಗೂ ಪಾವಗಡ ತಾಲ್ಲೂಕಿನಲ್ಲೂ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿ ಅಂಗಡಿ- ಮುಂಗಟ್ಟುಗಳು ಬಾಗಿಲು ಹಾಕಿವೆ. ಬಸ್ ಸೇರಿದಂತೆ ಖಾಸಗಿ ವಾಹನಗಳ ಓಡಾಟ ಸಹ ಸ್ಥಗಿತಗೊಂಡಿದೆ.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಬಂದ್ ಶಾಂತಿಯುತವಾಗಿ ನಡೆದಿದೆ. ಚಿತ್ರದುರ್ಗದಲ್ಲೂ ಬಂದ್ ಸಂಪೂರ್ಣವಾಗಿದ್ದು, ಜನ ಜೀವನ ಸ್ತಬ್ಧಗೊಂಡಿದೆ.
ದಾವಣಗೆರೆ ವರದಿ
ದಾವಣಗೆರೆ ಜಿಲ್ಲೆಯಲ್ಲೂ ಬಂದ್ ಸಂಪೂರ್ಣವಾಗಿದ್ದು, ಬೆಳಿಗ್ಗೆ ಓಡಾಡುತ್ತಿದ್ದ ಬಸ್ಗಳ ಮೇಲೆ ಕಲ್ಲು ತೂರಿರುವ ಘಟನೆಗಳು ವರದಿಯಾಗಿವೆ. ದಾವಣಗೆರೆ ನಗರದ ಹಲವೆಡೆ ಕನ್ನಡ ಪರ ಸಂಘಟನೆಗಳು ರಸ್ತೆಗಳಲ್ಲಿ ಟೈರ್ಗೆ ಬೆಂಕಿ ಹಚ್ಚಿ ಮಹದಾಯಿ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಶಿವಮೊಗ್ಗದಲ್ಲೂ ಬಂದ್ ಯಶಸ್ವಿಯಾಗಿದ್ದು, ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಕರ್ನಾಟಕದಲ್ಲಿ ಕಾವು ಜಾಸ್ತಿ
ಮಹದಾಯಿ ಕಿಚ್ಚಿನಿಂದ ಹತ್ತಿ ಉರಿಯುತ್ತಿರುವ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಬಂದ್ನ ಕಾವು ಜೋರಾಗಿದ್ದು, ಧಾರವಾಡ, ಹಾವೇರಿ, ಗದಗ, ಬೆಳಗಾವಿಗಳಲ್ಲಿ ಬಂದ್ ಸಂಪೂರ್ಣವಾಗಿದೆ. ಮಹದಾಯಿ ತೀರ್ಪಿನ ವಿರುದ್ಧ ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಬಂದೋಬಸ್ತ್
ಕರ್ನಾಟಕ ಬಂದ್ನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರಮುಖ ವೃತ್ತಗಳು, ಬಸ್ ನಿಲ್ದಾಣ, ಸರ್ಕಾರಿ ಕಛೇರಿಗಳಿಗೆ ಪೊಲೀಸ್ ಪಹರೆ ಹಾಕಲಾಗಿದೆ. ಅಹಿತಕರ ಘಟನೆಗಳನ್ನು ತಡೆಯಲು ಆರ್.ಎ.ಎಫ್., ಕೆ.ಎಸ್.ಆರ್.ಪಿ. ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
Comments are closed.