ಬೆಂಗಳೂರು: ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿರುವುದರಿಂದ ಹಲವಾರು ಮಂದಿ ಪರದಾಡುವಂತಾಗಿದೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ಅವಳಿ ನಗರಗಳಾದ ಹುಬ್ಬಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದ್ದು, ಸಂಪೂರ್ಣ ಸ್ಥಬ್ಧವಾಗಿದೆ. ಸರ್ಕಾರಿ ಸಾರಿಗೆ ನೌಕರರು ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಸರ್ಕಾರಿ ಬಸ್ ಸೇವೆಗಳು ಸ್ಥಗಿತಗೊಂಡಿವೆ. ಇದಲ್ಲದೆ ಆಟೋ ಸೇವೆಗಳು, ಟ್ಯಾಕ್ಸಿ, ಕ್ಯಾಬ್ ಸೇವೆಯನ್ನು ನಿಲ್ಲಿಸಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ಗೊಂಡ ಕಾರಣ ಮೆಜೆಸ್ಟಿಕ್‍ನಲ್ಲಿ ಬೀಡುಬಿಟ್ಟಿರುವ ವೃದ್ದರು ಹಾಗೂ ಅಸಹಾಯಕರು ತಿನ್ನಲು ಅಹಾರವಿಲ್ಲದೇ, ಕುಡಿಯಲು ನೀರೂ ಇಲ್ಲದೇ ಪರಿತಪಿಸುವಂತಾಯಿತು. ಆದರೆ ಇಲ್ಲೊಬ್ಬ ಬಾಲಕಿ ಮಾತ್ರ ಮೆಜೆಸ್ಟಿಕ್‍ನಲ್ಲಿ ಬೀಡುಬಿಟ್ಟಿರುವ ವೃದ್ದರು ಹಾಗೂ ಅಸಹಾಯಕರ ನೆರವಿಗೆ ಧಾವಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಬಂದ್ ಎಂದರೆ ಮನೆಯಲ್ಲೇ ಕೂತು ಕಾಲ ಕಳೆಯುವವರನ್ನು ನೋಡಿದ್ದೇವೆ. ಆದರೆ ಸ್ಕೇಟಿಂಗ್ ಮೂಲಕವೇ ಮೆಜೆಸ್ಟಿಕ್‍ನಲ್ಲಿದ್ದ ವೃದ್ಧರಿಗೆ-ಅಸಾಯಕರಿಗೆ ಆಹಾರದ ಪೊಟ್ಟಣ ಮತ್ತು ಸಾರನ್ನು ಪೂರೈಸುವ ಮೂಲಕ ಈ ಬಾಲಕಿ ಸಹಾಯ ಹಸ್ತ ಚಾಚಿದ್ದಾಳೆ.
ಈ ಬಾಲಕಿ ಹೆಸರು ನಂದಿತ ಎಂದು ಮೂಲತಃ ಬಳ್ಳಾರಿಯವರಾದ ನಂದಿತ ತಂದೆ ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 9ನೇ ತರಗತಿ ಓದುತ್ತಿರುವ ಈಕೆ 5 ವರ್ಷಗಳಿಂದ ಸ್ಕೇಟಿಂಗ್ ಕಲಿಯುತ್ತಿದ್ದಾಳೆ.
ಈ ದಿನ ಕರ್ನಾಟಕ ಬಂದ್ ಕರೆ ನೀಡಿರುವ ಬಗ್ಗೆ ತಿಳಿದುಕೊಂಡಿರುವ ಈ ಬಾಲಕಿ ತನ್ನ ತಂದೆಯೊಂದಿಗೆ ಬೆಂಗಳೂರಿನ ಮೆಜೆಸ್ಟಿಕ್‍ಗೆ ತೆರಳಿ ಸ್ಕೇಟಿಂಗ್ ಮಾಡಿಕೊಂಡೆ ಇಲ್ಲಿದ್ದ ವೃದ್ದರು ಮತ್ತು ಅಸಾಯಕರಿಗೆ ಆಹಾರ ಪೊಟ್ಟಣ ಮತ್ತು ನೀರು ಒದಗಿಸಿದ್ದಾಳೆ.ನಾವು ಊರುಗಳಿಗೆ ತೆರಳುವಾಗ ಕೆಲವರು ನೀರು-ಆಹಾರವಿಲ್ಲದೆ ಪರಿತಪಿಸುತಿರುವುದನ್ನು ಮನಗಂಡು ಈ ರೀತಿಯ ಸಹಾಯ ಮಾಡಲು ಮುಂದಾಗಿದ್ದೇವೆ. ನನ್ನ ತಂದೆ ಕೂಡ ನನ್ನ ಜೊತೆ ಕೈ ಜೋಡಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾಳೆ ನಂದಿತ.

Comments are closed.