ಪ್ರಮುಖ ವರದಿಗಳು

ಲಕ್ಷ ಲಕ್ಷ ಕೊಟ್ಟು ಖರೀದಿಸಿದ 13 ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡಿ ಕೊನೆಗೆ ಪೋಲೀಸರ ಅತಿಥಿಯಾದ !

Pinterest LinkedIn Tumblr

12

ಮುಂಬೈ: ವಯಸ್ಸಿನ ದೃಢೀಕರಣ ಪತ್ರದಲ್ಲಿ 20 ವರ್ಷ ಎಂದು ನಮೂದಿಸಲಾಗಿರುವ 13 ವರ್ಷದ ಬಾಲಕಿಯೊಬ್ಬಳನ್ನು 6.3 ಲಕ್ಷ ರೂ.ಗಳಿಗೆ ಖರೀದಿಸಿ, ಮದುವೆ ಮಾಡಿಕೊಂಡು ಕಳೆದ 10 ತಿಂಗಳಿನಿಂದ ಬಾಲಕಿಗೆ ಅಮಾನುಷವಾಗಿ ದೈಹಿಕ, ಲೈಂಗಿಕ ಹಿಂಸೆ ನೀಡಿದ ಪಾತಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ವತಃ ಆ ಹುಡುಗಿಯೇ ಇಲ್ಲಿನ ನಲ್ಲಸೊಪಾರ ಪೊಲೀಸ್ ಠಾಣೆಗೆ ಬಂದು ಆ ವ್ಯಕ್ತಿ ಕಳೆದ ಸೆಪ್ಟೆಂಬರ್‍ನಿಂದ ತನಗೆ ನೀಡುತ್ತಿರುವ ಹಿಂಸೆ ಬಗ್ಗೆ ತಿಳಿಸಿದ್ದಾಳೆ. ಬಾಲಕಿಯ ಸ್ಥಿತಿ ಕಂಡು ಆಘಾತಕ್ಕೊಳಗಾದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆ ವ್ಯಕ್ತಿಯ ಹೆಸರು ಲಚ್ಚಾರಾಮ್ ಕೃಪಾರಾಮ್ ಚೌಧರಿ. 35 ವರ್ಷದ ಚೌಧರಿ ಮಹಿಳೆಯರು ಮತ್ತು ಬಾಲಕಿಯರ ಮಾರಾಟ ಜಾಲದ ಕಿಂಗ್‍ಪಿನ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಾಲಕಿ ಮೂಲತಃ ರಾಜಸ್ಥಾನದ ಪಾಲಿ ಜಿಲ್ಲೆಯ ರಂಗಮ್ ಎಂಬ ಹಳ್ಳಿಯವಳಾಗಿದ್ದು, ಕಳೆದ ವರ್ಷ ಅವಳು 13 ವರ್ಷದವಳಿದ್ದಾಗ ವ್ಯಕ್ತಿಯೊಬ್ಬ ಆಕೆಯನ್ನು ಖರೀದಿಸಿ ತಂದಿದ್ದಾನೆ. ಪ್ರಮಾಣ ಪತ್ರದಲ್ಲಿ 20 ವರ್ಷ ಎಂದು ನಮೂದಿಸಿದ್ದು, ಮದುವೆ ಮಾಡಿಕೊಂಡಿದ್ದಾನೆ. 10 ತಿಂಗಳಿಂದಲೂ ಅವನ ಹಿಂಸೆ ಸಹಿಸಿಕೊಂಡಿದ್ದ ಬಾಲಕಿ ಶನಿವಾರ ಧೈರ್ಯ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಪೊಲೀಸ್ ಚೌಕಿಗೆ ಬಂದಿದ್ದಾಳೆ.

ಕೆಲ ವರ್ಷಗಳ ಹಿಂದೆ ತನ್ನ ತಾಯಿ ಮೃತಪಟ್ಟಿದ್ದು, ತಂದೆ ಎರಡನೆ ಮದುವೆಯಾಗಿದ್ದಾನೆ. ಮಲತಾಯಿಯ ಜತೆ ಬದುಕುತ್ತಿದ್ದ ಅವಳನ್ನು ಆಕೆ ಚೌಧರಿಗೆ ಮಾರಾಟ ಮಾಡಿದ್ದಾಳೆ. ವಯಸ್ಸು 13 ಇದ್ದದ್ದರಿಂದ 20 ವರ್ಷ ಎಂದು ಸರ್ಟಿಫಿಕೆಟ್ ಮಾಡಿಸಿದ್ದಾಳೆ. ಹಾಗಾಗಿ ಚೌಧರಿ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಇದಕ್ಕೂ ಮೊದಲು ಬಾಲಕಿಯನ್ನು ಒಮ್ಮೆ 50 ಸಾವಿರಕ್ಕೆ, ಮತ್ತೊಮ್ಮೆ 5.80 ಲಕ್ಷಕ್ಕೆ ಮಾರಾಟ ಮಾಡಲಾಗಿದ್ದು, ಕೊನೆಗೆ ವಾಪಸ್ ಬಂದಿದ್ದ ಅವಳನ್ನು ಚೌಧರಿ 6.3 ಲಕ್ಷ ರೂ.ಗಳಿಗೆ ಖರೀದಿಸಿದ್ದಾನೆ.

ಚೌಧರಿ ಬಾಲಕಿಯನ್ನು ಸಣ್ಣದೊಂದು ಕೋಣೆಯಲ್ಲಿ ಕೂಡಿ ಹಾಕಿ ಹೊರಕ್ಕೆ ಬಿಡುತ್ತಿರಲಿಲ್ಲ. ನಿತ್ಯವೂ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಈ ಮಧ್ಯೆ ತನ್ನನ್ನು ಇನ್ನೊಬ್ಬನಿಗೆ 15 ಲಕ್ಷ ರೂ.ಗಳಿಗೆ ಮಾರಾಟ ಮಾಡುವ ಬಗ್ಗೆ ಅವನು ಯಾರೊಂದಿಗೋ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದಾಳೆ. ಕೊನೆಗೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪಾರಾಗಿ ಪೊಲೀಸರ ಬಳಿ ಬಂದಿದ್ದಾಳೆ. ಈಗ ಈ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಸದ್ಯದಲ್ಲೇ ಮಕ್ಕಳ ಮಾರಾಟ ಜಾಲವನ್ನು ಭೇದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆ ವೇಳೆ ಚೌಧರಿ ಹಲವು ವಿಷಯಗಳನ್ನು ಬಾಯಿಬಿಟ್ಟಿದ್ದಾನೆ.

ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿಯ ವಯಸ್ಸು 14 ಮತ್ತು ಆಕೆಯ ಮೇಲಿನ ಅತ್ಯಾಚಾರವನ್ನು ವೈದ್ಯರು ಸಾಬೀತುಪಡಿಸಿದ್ದು, ಚೌಧರಿ ವಿರುದ್ಧ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಕೈಲಾಶ್ ಬಾರ್ವೆ ತಿಳಿಸಿದ್ದಾರೆ.

Comments are closed.