ಕರ್ನಾಟಕ

ಮೆಟ್ರೋದಲ್ಲೂ ಜನಜಂಗುಳಿ : 3 ಗಂಟೆಗಳಲ್ಲಿ 18ಸಾವಿರ ಮಂದಿ ಪ್ರಯಾಣ

Pinterest LinkedIn Tumblr

NAMMA_METRO

ಬೆಂಗಳೂರು: ವೇತನ ಹೆಚ್ಚಳ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯದ ಕಾರಣ ನಮ ಮೆಟ್ರೋ ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂತು. ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ಮೆಟ್ರೋದಲ್ಲಿಸುಮಾರು 13 ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಇಂದು ಬಸ್‍ಗಳ ಮುಷ್ಕರದಿಂದಾಗಿ ಬೆಳಗ್ಗೆ 6ರಿಂದ 9 ಗಂಟೆಯೊಳಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಡುವ ಸಾಕಷ್ಟು ಮಂದಿ ಮೆಟ್ರೊ ಬಳಸಿದ್ದರಿಂದ ಮೂರು ಗಂಟೆಗಳ ಅವಧಿಯಲ್ಲೇ 18 ಸಾವಿರ ಮಂದಿ ಪ್ರಯಾಣಿಸಿರುವುದು ದಾಖಲೆ.

ಪ್ರತಿ 6 ನಿಮಿಷಕ್ಕೊಮ್ಮೆ ಮೆಟ್ರೊ ಟ್ರೈನ್ ಓಡಿಸಲಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಟ್ರೈನ್ ಓಡಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‍ಸಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕೆರೋಲ ತಿಳಿಸಿದ್ದಾರೆ.

ಪ್ರತಿ ದಿನ 120 ಟ್ರಿಪ್‍ಗಳನ್ನು ಮಾಡುತ್ತಿದ್ದ ಮೆಟ್ರೋ ರೈಲುಗಳು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ 150 ಟ್ರಿಪ್‍ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಕಾಲ ಕ್ರಮೇಣ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಮೆಟ್ರೋ ಸಂಚಾರವನ್ನು ಹೆಚ್ಚಿಸಲಾಗುವುದು ಎಂದರು.

ದಿನ ದಿನಕ್ಕೆ ಮೆಟ್ರೋ ಜನಜನಿತವಾಗುತ್ತಿದ್ದು , ಇದರಲ್ಲಿ ಪ್ರಯಾಣಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಅತಿ ವೇಗ ಸುಗಮ ಸಂಚಾರದಿಂದಾಗಿ ಕೆಲವೇ ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಬಹುದಾಗಿರುವುದರಿಂದ ಇದರ ಬಳಕೆಗೆ ಜನ ಮುಂದಾಗಿದ್ದಾರೆ. ಇಂದು ನಗರ ಜನತೆಗೆ ಮೆಟ್ರೊ ರೈಲಿನ ಅವಶ್ಯಕತೆ ಹೆಚ್ಚಾಗಿ ಕಂಡುಬಂತು. ಸಾಕಷ್ಟು ಮಂದಿ ಕಚೇರಿ ತಲುಪಲು ಈ ವ್ಯವಸ್ಥೆ ಬಳಸಿಕೊಂಡಿದ್ದರಿಂದ ಮೆಟ್ರೊ ಸಿಬ್ಬಂದಿಯನ್ನು ಹೆಚ್ಚಳ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

Comments are closed.