ಬೆಂಗಳೂರು, ಜು. ೨೦ – ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಬ್ಇನ್ಸ್ಪೆಕ್ಟರ್ ರೂಪಾ ಅವರ ಆತ್ಮಹತ್ಯೆ ಯತ್ನ ಪ್ರಕರಣವನ್ನು ಗಮನಿಸಿದ್ದೇನೆ. ಇನ್ಸ್ಪೆಕ್ಟರ್ ಜೊತೆ ಕೆಲವೊಂದು ವಿಚಾರಗಳಲ್ಲಿ ಅವರಿಗೆ ಜಟಾಪಟಿ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಂದ ವರದಿ ಬಂದ ನಂತರ ಎಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಅವರು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ
ಪೊಲೀಸ್ ಇಲಾಖೆಯಲ್ಲಿ ಕೆಳಗಿನ ಸಿಬ್ಬಂದಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಪ್ರಕರಣಗಳಿಗೆ ತಡೆ ಹಾಕಲು ಇಡೀ ಇಲಾಖೆಗೆ ಹೊಸ ಸ್ವರೂಪ ನೀಡಲು ಚಿಂತನೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಲಿದೆ ಎಂದರು.
ಕೆಳಗಿನ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುವುದು ಹೆಚ್ಚಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಕೆಲವೊಂದು ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಲೇಬೇಕಾಗುತ್ತದೆ. ಆದರೂ ಅನಗತ್ಯವಾಗಿ ಕಿರುಕುಳ ನೀಡುವ ಹಿರಿಯ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಅವರು ಹೇಳಿದರು.
ಪೊಲೀಸ್ ಇಲಾಖೆಯ ಯಾವುದೇ ಸಿಬ್ಬಂದಿ ಅಧಿಕಾರಿಗಳಿರಲಿ ಯಾರೂ ಆತ್ಮಸ್ಥೈರ್ಯ ಬಿಡಬಾರದು, ಅವರ ಜೊತೆಗೆ ನಾನಿದ್ದೇನೆ, ತೊಂದರೆ, ಕಷ್ಟಗಳನ್ನು ನನ್ನ ಜೊತೆ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಹಸ್ತಕ್ಷೇಪ ಇಲ್ಲ
ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯನವರ ಹಸ್ತಕ್ಷೇಪದಿಂದ ಗೃಹ ಇಲಾಖೆಯಲ್ಲಿ ಕೆಲವೊಂದು ತೊಂದರೆಗಳು ಆಗುತ್ತಿವೆ ಎಂಬ ವರದಿಗಳನ್ನು ತಳ್ಳಿಹಾಕಿದ ಡಾ. ಜಿ. ಪರಮೇಶ್ವರ್, ನನಗೆ ಗೊತ್ತಿರುವ ಹಾಗೆ ಕೆಂಪಯ್ಯನವರು ಇದುವರೆಗೂ ಇಲಾಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಕೆಂಪಯ್ಯನವರನ್ನು ಸಮರ್ಥಿಸಿಕೊಂಡರು.
Comments are closed.