ಕರ್ನಾಟಕ

ಇನ್ಸ್‌ಪೆಕ್ಟರ್ ವರ್ತನೆಗೆ ಕಿಡಿ : ಕೈಕೊಟ್ಟ ತಾಳ್ಮೆ ರೂಪ ಆತ್ಮಹತ್ಯೆಗೆ ದಾರಿ

Pinterest LinkedIn Tumblr

BBMP-1ಬೆಂಗಳೂರು,ಜು.೨೦-ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್‌ಗೌಡ ಅವರು ಸಂಯಮದಿಂದ ವರ್ತಿಸಿದ್ದರೆ ರೂಪ ಅವರು ಕೂಡ ತಾಳ್ಮೆ ವಹಿಸಿದ್ದರೆ ಆತ್ಮಹತ್ಯೆ ಯತ್ನ ನಡೆಯುತ್ತಿರಲಿಲ್ಲ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ.

ಪ್ರಕರಣದ ಕುರಿತು ಡಿಸಿಪಿ ಸಂದೀಪ್‌ಪಾಟೀಲ್ ವಿಚಾರಣೆ ನಡೆಸಿ ಪ್ರಾಥಮಿಕ ವರದಿ ಸಿದ್ದಪಡಿಸಿದ್ದು ಅದರಲ್ಲಿ ಇಬ್ಬರು ಸಂಯಮದಿಂದ ವರ್ತಿಸದಿರುವುದು ತಾಳ್ಮೆ ಕಳೆದುಕೊಂಡಿರುವುದು ಉಲ್ಲೇಖಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ಮೊಬೈಲ್ ವಿಚಾರದಲ್ಲಿ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್‌ಗೌಡ ಅವರು ಸಂಯಮದಿಂದ ವರ್ತಿಸಿದ್ದರೆ ಪಿಎಸೈ ರೂಪ ತಂಬದ ಅವರ ಆತ್ಮಹತ್ಯೆ ಯತ್ನವನ್ನು ತಡೆಯಬಹುದಿತ್ತು ಅಲ್ಲದೇ ರೂಪ ಅವರು ಕೂಡ ತಾಳ್ಮೆ ವಹಿಸಿದ್ದರೆ ಆತ್ಮಹತ್ಯೆ ಯತ್ನ ಹಾದಿ ತುಳಿಯುವ ಸನ್ನಿವೇಶ ಸೃಷ್ಠಿಯಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಕೆಲ ತಿಂಗಳ ಹಿಂದೆ ಪೋಕ್ಸೋ ಪ್ರಕರಣದ ಸಂಬಂಧ ಬಂಧಿಸಿದ ಆರೋಪಿಯ ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿತ್ತು.ಈ ನಡುವೆ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯ ಹೆಸರನ್ನು ಕೈಬಿಟ್ಟ ಆರೋಪ ಹೊತ್ತ ಸಂಜೀವ್‌ಗೌಡ ಅವರು ಅಮಾನತ್ತುಗೊಂಡಿದ್ದರು. ಆ ಸಮಯದಲ್ಲಿ ಪೋಕ್ಸೋ ಪ್ರಕರಣದ ಆರೋಪಿಯಿಂದ ಜಪ್ತಿ ಮಾಡಲಾದ ಮೊಬೈಲ್‌ನ್ನು ಎಸಿಪಿ ಇನ್ಸ್‌ಪೆಕ್ಟರ್ ಕ್ಯಾಬಿನ್‌ನಲ್ಲಿ ಇಡುವಂತೆ ಹೇಳಿದ್ದರು.

ಅಮಾನತ್ತು ರದ್ದಾಗಿ ಮತ್ತೆ ಸೇವೆಗೆ ಮರಳಿದ ಸಂಜೀವ್‌ಗೌಡ ಅವರು ನಿನ್ನೆ ಮಧ್ಯಾಹ್ನ ಠಾಣೆಗೆ ಬಂದಿದ್ದಾರೆ ಈ ವೇಳೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಪೋಕ್ಸೋ ಪ್ರಕರಣದ ಆರೋಪಿಯು ಜಪ್ತಿ ಮಾಡಿದ್ದ ಮೊಬೈಲ್ ಕೊಡುವಂತೆ ಸಂಜೀವ್‌ಗೌಡ ಅವರನ್ನು ಕೇಳಿದ್ದು ಪ್ರಕರಣ ತನಿಖೆ ನಡೆಸಿದ್ದ ಪಿಎಸೈ ರೂಪ ಅವರನ್ನು ಛೇಂಬರ್‌ಗೆ ಕರೆದು ಮೊಬೈಲ್‌ನ್ನು ಆರೋಪಿಗೆ ಹಿಂತಿರುಗಿಸುವಂತೆ ಹೇಳಿದ್ದಾರೆ.

ಅದಕ್ಕೆ ರೂಪ ಅವರು ನಿಮ್ಮ ಬಳಿಯೇ ಮೊಬೈಲ್ ಇದ್ದು ನೀವೆ ಕೊಡಿ ಎಂದಾಗ ಆಕ್ರೋಶಗೊಂಡ ಸಂಜೀವ್‌ಗೌಡ ಆರೋಪಿ ಹಾಗೂ ಸಂಬಂಧಿಕರ ಮುಂದೆಯೇ ವಿವರಣೆ ನೀಡಲು ಅವಕಾಶ ನೀಡದೇ ರೂಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಇಬ್ಬರ ನಡುವೆ ಜೋರು ಮಾತಿನ ಚಕಮಕಿ ನಡೆದಿದೆ.

ಅಲ್ಲಿಂದ ತಮ್ಮ ಸ್ಥಾನಕ್ಕೆ ಅಳುತ್ತಾ ಮರಳಿದ ರೂಪ ಆಳುತ್ತಾ ಕುಳಿತಿದ್ದು ಎಷ್ಟು ಬಾರಿ ಛೇಂಬರ್‌ಗೆ ಸಂಜೀವ್‌ಗೌಡ ಅವರು ಕರೆದರೂ ಹೋಗದೇ ರೂಪ ಹಠ ಹಿಡಿದು ಮನೆಗೆ ಮರಳಿದ್ದಾರೆ ಠಾಣಾ ಡೈರಿಯಲ್ಲಿ ಸಂಜೀವ್‌ಗೌಡ ಅವರು ಕರ್ತವ್ಯ ನಿರ್ಲಕ್ಷ್ಯದ ವಿಷಯನ್ನು ಬರೆದಿದ್ದಾರೆ.
ಕೊಲೆ ಪ್ರಕರಣದಲ್ಲಿ ಅಮಾನತ್ತಾಗಲು ರೂಪ ಅವರೇ ಕಾರಣರು ಎಂದು ಠಾಣೆಯಲ್ಲಿದ್ದ ಕೆಲವರು ಹೇಳಿದ್ದರಿಂದ ಅಲ್ಲದೇ ವಿಜಯನಗರ ಠಾಣೆಗೆ ಬಂದ ಸಂಜೀವ್‌ಗೌಡ ಅವರು ತನಿಖೆ ನಡೆಸಿದ ಕೆಲ ಪ್ರಕರಣಗಳನ್ನು ವಕೀಲರಾಗಿರುವ ಪತಿ ನಟರಾಜ್ ಅವರಿಗೆ ರೂಪ ಅವರು ಕೊಡಿಸಿದ್ದರು ಎನ್ನುವುದು ಕೋಡ ರೂಪ ಅವರ ಮೇಲೆ ಸಂಜೀವ್‌ಗೌಡ ಕೋಪಗೊಳ್ಳಲು ಕಾರಣವಾಗಿದೆ.
ಅದು ಮೊಬೈಲ್ ವಿಚಾರದಲ್ಲಿ ವಿಕೋಪಕ್ಕೆ ತಿರುಗಿದೆ ರೂಪ ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿರುವ ಆರೋಪ ಎದುರಿಸುತ್ತಿರುವ ಸಂಜೀವ್‌ಗೌಡ ಅವರು ಕೂಡ ನಾನು ಯಾವುದೇ ತಪ್ಪು ಮಾಡಿಲ್ಲ ನನ್ನ ಮೇಲೆ ಕ್ರಮ ಕೈಗೊಂಡರೆ ನಾನು ಕೂಡ ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಡಿಸಿಪಿ ಸಂದೀಪ್ ಪಾಟೀಲ್ ಅವರು ಪ್ರಕರಣದ ಕುರಿತು ವಿಜಯನಗರ ಠಾಣೆಯ ಸಿಬ್ಬಂದಿ ಪ್ರತ್ಯಕ್ಷದರ್ಶಿಗಳು ಹಾಗೂ ರೂಪ ಅವರ ಪತಿಯಿಂದ ಮಾಹಿತಿ ಪಡೆದುಕೊಂಡು ಪ್ರಾಥಮಿಕ ವರದಿ ಸಿದ್ದಪಡಿಸಿದ್ದಾರೆ ರೂಪ ಅವರು ಗುಣಮುಖರಾದ ನಂತರ ಅವರಿಂದ ಮಾಹಿತಿ ಪಡೆದುಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದ ವರದಿ ಸಲ್ಲಿಸಲಿದ್ದಾರೆ.

Comments are closed.