
ಮಂಗಳೂರು, ಜು.20 : ಕೆಂಜಾರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾರುತಿ ಸ್ವಿಪ್ಟ್ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿದ್ದ ಕಟ್ಟೆಯೊಂದಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಪವಾಡ ಸದೃಶ್ಯವಾಗಿ ಪಾರಾದ ಘಟನೆ ಇಂದು ಮುಂಜಾನೆ ಯೆಯ್ಯಾಡಿ ಬಳಿ ನಡೆದಿದೆ.
ಉಳ್ಳಾಲ ಮೂಲದ ಕುಟುಂಬವೊಂದು ಇಂದು ಬೆಳಿಗ್ಗೆ ಸುಮಾರು ೬.೪೫ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭ ಭಾರೀ ಮಳೆಯಾಗುತ್ತಿದ್ದು,ಕೊಂಚಾಡಿ ಬಳಿ ರಸ್ತೆಯಲ್ಲಿ ನೀರು ನಿಂತಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಕಟ್ಟೆಗೆ ಡಿಕ್ಕಿ ಹೊಡೆದಿದೆ.


ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರು ಮುಂದೆ ಚಲಿಸಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಯಾವುದೇ ಅನಾಹುತ ನಡೆದಿಲ್ಲ. ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಇಬ್ಬರು ಪುತ್ರರು ಇದ್ದು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವ ತಂದೆಯವರನ್ನು ಕರೆದೊಯ್ಯಲು ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.