
ಬೆಂಗಳೂರು: ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ತಲೆದಂಡವಾಗುತ್ತಿದ್ದಂತೆ ಸರ್ಕಾರ ಅವರ ಜನ್ಮ ಜಾಲಾಡಲು ಮುಂದಾಗಿದ್ದು, 15 ದಿನದೊಳಗೆ ಪ್ರಕರಣದ ತನಿಖಾ ವರದಿ ನೀಡುವಂತೆ ಸಿಐಡಿಗೆ ಸೂಚನೆ ಕೊಟ್ಟಿದೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. 15 ದಿನಗಳಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದ ಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ. ನಿನ್ನೆ ಸಂಜೆ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ, ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಾಂತಿ ಅವರುಗಳನ್ನು ಕಡ್ಡಾಯವಾಗಿ ರಜೆಯಿಂದ ತೆರಳಬೇಕೆಂದು ಸರ್ಕಾರ ಸೂಚನೆ ಕೊಟ್ಟಿತ್ತು.
ನ್ಯಾಯಾಲಯದ ಆದೇಶದಿಂದ ಭಾರೀ ಮುಖಭಂಗಕ್ಕೆ ಒಳಗಾದ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ಜಾರ್ಜ್ ರಾಜೀನಾಮೆ ಪಡೆದರು. ಗಣಪತಿ ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅವರು, 15 ದಿನಗಳಲ್ಲಿ ಪೂರ್ಣ ವರದಿ ನೀಡುವಂತೆ ತನಿಖಾ ತಂಡಕ್ಕೆ ಸೂಚನೆ ಕೊಟ್ಟು ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿಐಡಿ ಡಿಐಜಿ ಕಿಶೋರ್‍ಚಂದ್ರ ಅವರು ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಹಾಗೂ ಎಸ್‍ಪಿ ಕುಮಾರಸ್ವಾಮಿಗೆ ಮೌಖಿಕ ಆದೇಶ ನೀಡಿರುವ ಅವರು, 15 ದಿನಗಳೊಳಗೆ ಪೂರ್ಣ ವರದಿ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ. ಡಿಐಜಿಯಿಂದಲೇ ತನಿಖೆ ಪೂರ್ಣಗೊಳಿಸುವಂತೆ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖಾ ತಂಡ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದೆ. ತನಿಖೆ ನಡೆಸಲು ಸಿಐಡಿಗೆ ಎಸ್‍ಪಿ ಕುಮಾರಸ್ವಾಮಿ ನೇತೃತ್ವದಲ್ಲಿ 10 ಮಂದಿ ಡಿವೈಎಸ್‍ಪಿ, 20 ಮಂದಿ ಇನ್ಸ್‍ಪೆಕ್ಟರ್ ಹಾಗೂ 10 ಮಂದಿ ಕೆಳಹಂತದ ಸಿಬ್ಬಂದಿಯನ್ನು ನೀಡಲಾಗಿದೆ.
ಜನ್ಮ ಜಾಲಾಡಲು ಸೂಚನೆ:
ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅವರ ಆತ್ಮಹತ್ಯೆಗೆ ನಿಜವಾದ ಕಾರಣಗಳೇನೆಂಬುದನ್ನು ಇಂಚಿಂಚು ಮಾಹಿತಿ ಕಲೆ ಹಾಕುವಂತೆ ಸಿಐಡಿಗೆ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿಯ ಮೂರು ತಂಡ ಈ ಹಿಂದೆ ಗಣಪತಿ ಯಾವ ಯಾವ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೋ ಅಲ್ಲಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲು ಮುಂದಾಗಿದೆ. 1994ರಿಂದ 2016ರ ವರೆಗೂ ಗಣಪತಿ ಯಾವ ಯಾವ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು, ಅವರ ಮೇಲೆ ಬಂದಿರುವ ಆರೋಪಗಳೇನು, ವೃತ್ತಿ ಜೀವನದಲ್ಲಿ ಇತರೆ ಅಧಿಕಾರಿಗಳ ಜತೆ ಹೊಂದಿಕೊಂಡು ಹೋಗುತ್ತಿದ್ದ ರೀತಿ-ನೀತಿ ಸೇರಿದಂತೆ ಪ್ರತಿಯೊಂದು ಮಾಹಿತಿ ಕಲೆ ಹಾಕಬೇಕೆಂದು ನಿರ್ದೇಶ ನೀಡಲಾಗಿದೆ. ಈಗಾಗಲೇ ಗಣಪತಿ ಕಾರ್ಯನಿರ್ವಹಿಸಿದ್ದ ಬೆಂಗಳೂರಿನ ರಾಜಗೋಪಾಲನಗರ, ಮಡಿವಾಳ ಪೊಲೀಸ್ ಠಾಣೆಗೆ ಒಂದು ತಂಡ ಭೇಟಿ ನೀಡಿದರೆ, ಮಂಗಳೂರಿಗೆ ಮತ್ತೊಂದು ತಂಡ ಹಾಗೂ ಉಡುಪಿಗೆ ಇನ್ನೊಂದು ತಂಡ ಮಾಹಿತಿ ಕಲೆ ಹಾಕಲು ತೆರಳಿದೆ.
ಮೊಬೈಲ್ ಮಾಹಿತಿ ಕಲೆ ಹಾಕಿ:
ಕಳೆದ ಒಂದು ವರ್ಷದ ಅವಧಿಯಲ್ಲಿ ಎಂ.ಕೆ.ಗಣಪತಿ ಯಾರ್ಯಾರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದಾರೆ ಮತ್ತು ಅವರ ಮೊಬೈಲ್‍ಗೆ ಬಂದಿರುವ ಕರೆಗಳು ಸೇರಿದಂತೆ ಹೊರ ಹೋಗಿರುವ ಹಾಗೂ ಬಂದಿರುವ ಒಂದು ವರ್ಷದ ಕರೆಗಳ ವಿವರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದೆ. ನನಗೆ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಎಡಿಜಿಪಿ ಪ್ರಣವ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ, ಎ.ಎಂ.ಪ್ರಸಾದ್ ಕಿರುಕುಳ ನೀಡಿದ್ದರೆಂದು ಆರೋಪಿಸಿದರು. ಇದರ ಸತ್ಯಾಸತ್ಯತೆ ತಿಳಿಯಲು ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕಬೇಕು. ಅವರ ಕುಟುಂಬದರ ಜತೆ ಸಂಬಂಧ ಅನ್ಯೋನ್ಯವಾಗಿತ್ತೆ ಎಂಬುದನ್ನು ಪತ್ತೆ ಮಾಡಲು ಕಿಶೋರ್‍ಚಂದ್ರ ತನಿಖಾ ತಂಡಕ್ಕೆ ನಿರ್ದೇಶಿಸಿದ್ದಾರೆ. ಈಗಾಗಲೇ ತನಿಖಾ ತಂಡವು ವಿವಿಧ ಸ್ಥಳಗಳಿಗೆ ತೆರಳಿದ್ದು, ಗಣಪತಿಯ ಇಂಚಿಂಚು ಮಾಹಿತಿ ಕಲೆ ಹಾಕಿ 15 ದಿನಗಳೊಳಗೆ ಸರ್ಕಾರಕ್ಕೆ ಪೂರ್ಣ ವರದಿ ನೀಡಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed.