ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಆಸ್ತಿ ವಹಿ ಪುಸ್ತಕದಲ್ಲಿ ದಾಖಲಿಸಿಕೊಂಡು 590 ಆಸ್ತಿಗಳಿಗೆ ಖಾತಾ ನೀಡಿರುವುದು
ಬಹಿರಂಗವಾಗಿದ್ದು, ಎಲ್ಲಾ ಬೋಗಸ್ ಖಾತೆಗಳನ್ನು ರದ್ದುಪಡಿಸಿ ಬಿಬಿಎಂಪಿ ವಿಶೇಷ ಆಯುಕ್ತೆ (ಕಂದಾಯ) ವಿ. ರಶ್ಮಿ ಆದೇಶ ಹೊರಡಿಸಿದ್ದಾರೆ.
ಸೋಮವಾರ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷ ಎಂ. ಶಿವರಾಜು ಅವರ ಅಧ್ಯಕ್ಷತೆಯಲ್ಲಿ ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ವಲಯಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಅಲ್ಲದೆ, 2016-17ನೇ ಸಾಲಿನ ಆಸ್ತಿ ತೆರಿಗೆ ವಸೂಲಾತಿ ಹಾಗೂ
ಜಾಹೀರಾತು ಫಲಕಗಳ ಸಮೀಕ್ಷೆ, ಆಸ್ತಿ ತೆರಿಗೆ ತಂತ್ರಾಂಶದಲ್ಲಿನ ಲೋಪದೋಷಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕರಿಂದ ಬೋಗಸ್ ಖಾತಾ ಬಗ್ಗೆ ಸಮಿತಿಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಖಾತಾಗಳ ಬಗ್ಗೆ ಪರಿಶೀಲನೆ ಮಾಡಲಾಯಿತು. ಈ ವೇಳೆ ಬರೋಬ್ಬರಿ 590 ಆಸ್ತಿಗಳು ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಆಸ್ತಿ ವಹಿ ಪುಸ್ತಕದಲ್ಲಿ ದಾಖಲಾಗಿವೆ. ಇವುಗಳೆಲ್ಲಾ ಬೋಗಸ್
ಖಾತೆಗಳು ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ 590 ಖಾತೆಗಳನ್ನೂ ರದ್ದುಪಡಿಸುವಂತೆ ರಶ್ಮಿ ಅವರಿಗೆ ಆದೇಶ ನೀಡಿದ್ದೆ. ಅದರಂತೆ ಅವರು
ಬೋಗಸ್ ಖಾತೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ ಎಂದು ಶಿವರಾಜು ಹೇಳಿದ್ದಾರೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ
ವಲಯದಲ್ಲಿ ಆನ್ಲೈನ್ ಮೂಲಕ ಮತ್ತು ಚಲನ್ ಮೂಲಕ ಒಟ್ಟು 112 ಕೋಟಿ ರೂ. ಮತ್ತು ರಾಜ ರಾಜೇಶ್ವರಿ ನಗರ ವಲಯದಲ್ಲಿ 72 ಕೋಟಿ ರೂ. ಸಂಗ್ರಹವಾಗಿದೆ.
ತೆರಿಗೆ ಪಾವತಿಸಿರುವ ಎಲ್ಲಾ ಆಸ್ತಿಗಳನ್ನೂ ಲೆಕ್ಕಪರಿಶೋಧನೆಗೆ ಒಳಪಡಿಸಲು ಆದೇಶಿಸಲಾಗಿದೆ. ಇದೇ ವೇಳೆ ಶೇ.20 ಹಾಗೂ ಶೇ.25ಕ್ಕಿಂತ ಹೆಚ್ಚುವರಿ ತೆರಿಗೆ ಪಾವತಿಸಿರುವವರಿಗೆ ಮುಂದಿನ ಆರ್ಥಿಕ ಸಾಲಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವಲಯದಿಂದ ಎರಡು
ತಿಂಗಳಲ್ಲಿ 100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಜಾಹೀರಾತು ವಿಭಾಗದಲ್ಲಿಯೂ ಹಂತ ಹಂತವಾಗಿ ಅನಧಿಕೃತ ಜಾಹಿರಾತು ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ಹಾಜರಿದ್ದರು.
-ಉದಯವಾಣಿ
Comments are closed.