
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಭದ್ರತಾ ಸಿಬ್ಬಂದಿ ಕೈಯಲ್ಲಿ ಹತನಾದ ಬಳಿಕ ಬೆಂಕಿ ಬಿದ್ದಂತಾಗಿರುವ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ೩ನೇ ದಿನವಾದ ಇಂದೂ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ನೂರಕ್ಕೂ ಹೆಚ್ಚು ಮಂದಿ ಅಮರನಾಥ ಯಾತ್ರಾರ್ಥಿಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಕಣಿವೆಯಲ್ಲಿ ಸಿಕ್ಕಿಬಿದ್ದಿರುವ ಉತ್ತರ ಕರ್ನಾಟಕ ಮೂಲದ ಸಾವಿರಾರು ಕನ್ನಡಿಗರು ರಕ್ಷಣೆಗಾಗಿ ಸರ್ಕಾರದ ಮೊರೆ ಇಡುತ್ತಿರುವ ವರದಿಗಳು ಬಂದಿವೆ. ಹುನಗುಂದ ತಹಶೀಲ್ದಾರ್ ಕುಟುಂಬದವರು ಸರ್ಕಾರಕ್ಕೆ ಯಾತ್ರಿಗಳ ಸ್ಥಿತಿಗತಿಯನ್ನು ಗಮನಕ್ಕೆ ತಂದಿದ್ದಾರೆ.
ಕೇಂದ್ರ ಕಾಶ್ಮೀರದ ಗಂದೇರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಮೂಲಕ ಅಮರನಾಥ ಯಾತ್ರೆಗೆ ಹೊರಟಿದ್ದ ಬಹುತೇಕ ಯಾತ್ರಾರ್ಥಿಗಳು ಸ್ಥಳೀಯ ಪ್ರವಾಸಿ ಸ್ವಾಗತ ಕೇಂದ್ರದಲ್ಲೇ ಬೀಡುಬಿಟ್ಟಿದ್ದರು. ಮರಳಿ ಬಲ್ತಾಲ್ ಶಿಬಿರಕ್ಕೆ ತೆರಳಿರುವ ಯಾತ್ರಾರ್ಥಿಗಳು ಕೆಲವೇ ಗಂಟೆಗಳಲ್ಲಿ ಶ್ರೀನಗರ ತಲುಪಿದ್ದಾರೆ.
ಜುಲೈ ೮ರಂದು ಯಾತ್ರೆಗೆ ಹೊರಟೆವು. ಅಂದು ತಡರಾತ್ರಿ ಶಿಬಿರ ತೊರೆದೆವು. ಶ್ರೀನಗರ ತೊರೆದು ಜಮ್ಮುವಿನಲ್ಲಿ ನಮಗಾಗಿ ಕಾಯುತ್ತಿದ್ದ ಬಸ್ನಲ್ಲಿ ಪ್ರಯಾಣಿಸಲು ಹೊರಟೆವು. ಆದರೆ ಶ್ರೀನಗರ ತಲುಪಿದಾಗ ಯಾವುದೇ ಬಸ್ ಸಂಚಾರವಿರಲಿಲ್ಲ ಎಂದು ಬಿಹಾರ ಮೂಲದ ಯಾತ್ರಾರ್ಥಿ ಅಳಲು ತೋಡಿಕೊಂಡರು.
ಅಂದು ಬೆಳಗಿನ ಜಾವ ಮೂರು ಗಂಟೆಗೆ ಶ್ರೀನಗರ ತಲುಪಿದೆವು. ಆದರೆ ಈವರೆಗೂ ಯಾವುದೇ ಬಸ್ನ ಸುಳಿವಿಲ್ಲ. ನಾವು ಜಮ್ಮುವಿಗೆ ತೆರಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಶ್ರೀನಗರ ತಲುಪುವವರೆಗೂ ಮಾಹಿತಿಗಳು ಲಭ್ಯವಾಗುತ್ತಿದ್ದವು. ಆದರೆ ಈಗ ಯಾವುದೇ ಮಾಹಿತಿ ಸಿಗುತ್ತಿಲ್ಲ. ಜಮ್ಮುವನ್ನು ಸೇರುವುದಾದರೂ ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಉತ್ತರಪ್ರದೇಶದ ಯಾತ್ರಾರ್ಥಿ ಬನ್ಸಿಲಾಲ್ ತಿಳಿಸಿದರು.
ಬದಲಿ ವ್ಯವಸ್ಥೆಗೆ ಮುಂದಾದರೆ ಟ್ಯಾಕ್ಸಿ ಚಾಲಕರು ಸುಲಿಗೆಗೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗಂದೇರ್ಬಲ್ನ ಉಪ ಪೊಲೀಸ್ ಆಯುಕ್ತ ತಾರೀಖ್ ಹುಸೇನ್ ಅವರು, ೨೪,೫೦೦ ಮಂದಿ ಭಕ್ತಾದಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
೧೭೦೦ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ಸುರಕ್ಷಿತವಾಗಿ ಜಮ್ಮು ತಲುಪಬಹುದು ಎಂದು ತಿಳಿಸಿದರು. ನಿನ್ನೆ ನಡೆದ ಘರ್ಷಣೆಯಲ್ಲಿ ಕುಲ್ಗಂ ಜಿಲ್ಲೆಯ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ೨೩ಕ್ಕೆ ಏರಿಕೆಯಾಗಿದೆ. ಮೃತರನ್ನು ಅಹ್ಮದ್ ಮಿರ್(೨೨) ಮತ್ತು ಖುರ್ಷಿದ್ ಅಹ್ಮದ್ ಮಿರ್(೩೮) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿ ಮುಂದುವರೆದಿದ್ದು, ೨೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಗಲಭೆಕೋರರು ದಮಾಲ್ ಹಾಂಜಿಪುರದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಪರಿಣಾಮ ಮೂವರು ಪೊಲೀಸರು ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರದ ವಕ್ತಾರ ನಯೀಮ್ ಅಖ್ತರ್ ತಿಳಿಸಿದ್ದಾರೆ.
ತುರ್ತು ಸಂಪುಟ ಸಭೆ ಕರೆದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಘಟನೆಯಿಂದ ಉಂಟಾದ ಸಾವು ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ. ಭದ್ರತಾ ಪಡೆ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ ಆ ಬಗ್ಗೆಯೂ ತನಿಖೆ ಮಾಡುವುದಾಗಿ ಭರವಸೆ ನೀಡಿದರು.
Comments are closed.