ಢಾಕಾ : 20 ವಿದೇಶೀಯರನ್ನು ಅಮಾನುಷವಾಗಿ ಕತ್ತು ಸೀಳಿ ಕೊಲ್ಲಲಾದ ಢಾಕಾ ಕೆಫೆ ಮೇಲಿನ ದಾಳಿಕೋರರಲ್ಲಿ ಇಬ್ಬರು ಮುಂಬಯಿಯ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕೀರ್ ನಾಯ್ಕ್ ಬೋಧನೆಯಿಂದ ಪ್ರಭಾವಿತರಾಗಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗಿರುವ ನಾಯ್ಕ ಕೊನೆಗೂ ತನ್ನ ಮೌನವನ್ನು ಮುರಿದು “ಐಸಿಸ್ ಉಗ್ರ ಸಂಘಟನೆಯು ಇಸ್ಲಾಂ ವಿರೋಧಿ’ ಎಂದಿರುವುದಾಗಿ “ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪೀಸ್ ಟೀವಿ’ಯ ಇಸ್ಲಾಂ ಧರ್ಮ ಪ್ರಚಾರಕ 50ರ ಹರೆಯದ ನಾಯ್ಕ್ , “ಇಸ್ಲಾಮಿಕ್ ಸ್ಟೇಟ್ ಎನ್ನುವ ಪದ ಸಮೂಹವೇ ಇಸ್ಲಾಂ ವಿರೋಧಿಯಾಗಿದೆ. ಐಸಿಸ್ ಉಗ್ರ ಸಂಘಟನೆಯವರು ಮುಸ್ಲಿಂ ಮತಾನುಯಾಯಿಗಳ ಶತ್ರುಗಳಾಗಿದ್ದಾರೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
“ಇಸ್ಲಾಮಿಕ್ ಸ್ಟೇಟ್ ಎನ್ನುವ ಹೆಸರನ್ನು ಬಳಸುವ ಮೂಲಕ ನಾವು ಇಸ್ಲಾಂ ಧರ್ಮವನ್ನೇ ಖಂಡಿಸಿದಂತಾಗುತ್ತದೆ. ಅವರು ಇರಾಕ್ ಮತ್ತು ಸಿರಿಯಾದ ಇಸ್ಲಾಂ ವಿರೋಧಿಗಳಾಗಿದ್ದಾರೆ ಮತ್ತು ಅಮಾಯಕ ವಿದೇಶೀಯರನ್ನು ಕೊಂದವರಾಗಿದ್ದಾರೆ. ಇಸ್ಲಾಂ ವಿರೋಧಿಗಳೇ ಇವರಿಗೆ ಈ ಹೆಸರನ್ನು ಕೊಟ್ಟಿರುತ್ತಾರೆ’ ಎಂದು ನಾಯ್ಕ್ ಹೇಳಿದರು.
ಪೀಸ್ ಟಿವಿಯ ವಿವಾದಾತ್ಮಕ ಪ್ರವಚನಕಾರ ನಾಯ್ಕ್ ಪ್ರವೇಶಕ್ಕೆ ಬ್ರಿಟನ್ ಮತ್ತು ಕೆನಡಾ ದೇಶ ನಿರ್ಬಂಧ ಹೇರಿದೆ. ಎಲ್ಲಾ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಕರೆ ನೀಡಿದ್ದ ಝಾಕೀರ್ ಸಂದೇಶವನ್ನು ಢಾಕಾದಲ್ಲಿ ಹತನಾದ ಉಗ್ರರಲ್ಲಿ ಒಬ್ಬನಾದ ಅವಾಮಿ ಲೀಗ್ ನಾಯಕನ ಮಗ ರೋಹನ್ ಇಮ್ತಿಯಾಜ್ ಕಳೆದ ವರ್ಷ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿರುವುದಾಗಿ ದ ಡೈಲಿ ಸ್ಟಾರ್ ವರದಿ ಮಾಡಿದೆ.
50ರ ಹರೆಯದ ಝಾಕೀರ್ ವೈದ್ಯನಾಗಿದ್ದು, ಈತ ಅಲ್ ಖೈದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಟೆರರಿಸ್ಟ್ ಎಂದು ಕರೆಯಲು ನಿರಾಕರಿಸಿದ್ದ. ಹಾಗಾಗಿ ಬ್ರಿಟನ್, ಮಲೇಶ್ಯಾ, ಕೆನಡಾ ಝಾಕೀರ್ ನಾಯ್ಕ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದವು.
-ಉದಯವಾಣಿ
Comments are closed.