ಚೆನ್ನೈ: ತಾನು ಹೊಸ ಹುಮ್ಮಸ್ಸಿನಿಂದ ಬರವಣಿಗೆ ಆರಂಭಿಸುವೆ ಎಂದು ತಮಿಳು ಲೇಖಕ ಪೆರುಮಾಳ್ ಮುರುಗನ್ ಹೇಳಿದ್ದಾರೆ. ಕಳೆದ ವರ್ಷ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಮಾಧೋರುಬಾಗನ್ (ಮಹಿಳೆಯ ಒಂದು ಭಾಗ) ಕಾದಂಬರಿ ವಿವಾದಕ್ಕೀಡಾಗಿ ಕೋರ್ಟ್ ಮೆಟ್ಟಲೇರಿತ್ತು.
ನಾಲ್ಕು ವರ್ಷಗಳ ಹಿಂದೆ ಬರೆದಿದ್ದ ಈ ತಮಿಳು ಕಾದಂಬರಿಯ ಬಗ್ಗೆ ಅಲ್ಲಿಯವರೆಗೆ ಯಾವುದೇ ಅಪಸ್ವರ ಕೇಳಿರಲಿಲ್ಲ. ಆದರೆ ಅದರ ಇಂಗ್ಲಿಷ್ ಅವತರಣಿಕೆ ‘ಒನ್ ಪಾರ್ಟ್ ವುಮನ್ ‘ಪ್ರಕಟವಾಗಿದ್ದೇ ತಡ ಪೆರುಮಾಳ್ ಮುರಗನ್ ವಿರುದ್ಧ ಅಸಹಿಷ್ಣುತೆಯ ಕೂಗು ಕೇಳಿ ಬಂತು. ಈ ವಿರೋಧದ ಕೂಗು ತಾರಕಕ್ಕೇರುತ್ತಿದ್ದಂತೆ ಮುರುಗನ್ ಬೇಸತ್ತು ಫೇಸ್ಬುಕ್ ನಲ್ಲಿ ‘ಪೆರುಮಾಳ್ ಮುರುಗನ್ ಎಂಬ ಹೆಸರಿನ ಬರಹಗಾರ ತೀರಿಹೋದ’ ಎಂದು ಬರೆದು ಬಿಟ್ಟರು.
ಪೆರುಮಾಳ್ ಮುರುಗನ್ ವಿರುದ್ಧ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಾಹಿತ್ಯ ರಚನೆಯ ದೂರು ದಾಖಲಾಗಿ ಅದು ಕೋರ್ಟ್ ಮೆಟ್ಟಿಲೇರಿ,ಒಂದೂವರೆ ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಮದ್ರಾಸ್ ಹೈಕೋರ್ಟ್ ಜುಲೈ5 ರಂದು ಮಹತ್ವದ ತೀರ್ಪು ನೀಡಿತ್ತು.
ಪೆರುಮಾಳ್ ಮುರುಗನ್ ನಿರಾತಂಕವಾಗಿ ಸಾಹಿತ್ಯ ರಚನೆ ಮುಂದುವರೆಸಬಹುದು ಎಂದು ಹೇಳಿರುವ ಕೋರ್ಟ್, ಆರ್ಡಿಒ ಸಮ್ಮುಖದಲ್ಲಿ ನಡೆಸಲಾದ ಸಂಧಾನಕ್ಕೆ ಕಿಮ್ಮತ್ತು ಕೊಡಬೇಕಿಲ್ಲವೆಂದು ಸ್ಪಷ್ಟಪಡಿಸಿದೆ. ಅಲ್ಲದೆ, “ಬೇಕಿದ್ದವರು ಪುಸ್ತಕ ಓದಿ, ಇಲ್ಲವೇ ಬಿಸಾಡಿ. ಸಾಹಿತಿಯ ಮೇಲೆ ಬರೆಯದಂತೆ ಒತ್ತಡ ಹೇರಲು ಹೋಗಬೇಡಿ” ಎಂದೂ ತಾಕೀತುಮಾಡಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಮುರುಗನ್, ನಾನು ಆ ತೀರ್ಪಿನಲ್ಲಿ ಹೇಳಿದ ಕೊನೆಯ ಸಾಲನ್ನು ಪುನರುಚ್ಛರಿಸುತ್ತಿದ್ದೇನೆ. “ಲೇಖಕನಿಗೆ ಯಾವುದು ಇಷ್ಟವೋ ಅದನ್ನು ನಿರಾತಂಕವಾಗಿ ಬರೆಯಲಿ. ನಾನು ಮತ್ತೆ ಬಂದಿದ್ದೇನೆ. ಈ ಕ್ಷಣವನ್ನು ನಾನು ಸಂತೋಷದಿಂದ ಕಳೆಯಲು ಇಷ್ಟ ಪಡುತ್ತೇನೆ. ನನಗೆ ಬೆಂಬಲವಾಗಿ, ನನ್ನೊಂದಿಗೆ ನಿಂತ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನಾನು ಹೊಸ ಹುಮ್ಮಸ್ಸಿನಿಂದ ಮತ್ತೆ ಬರೆಯಲು ಶುರು ಮಾಡುತ್ತೇನೆ ಎಂದು ಹೇಳಿರುವ ಮುರುಗನ್ ‘ದ ಫ್ಲವರ್’ ಎಂಬ ಕವನವೊಂದನ್ನು ಬರೆದಿದ್ದಾರೆ. ಆ ಕವನದ ಕನ್ನಡ ಅನುವಾದ ಹೀಗಿದೆ.
‘ಹೂವು’
ಮಹಾಸ್ಫೋಟ ಮುಗಿದ ಮೇಲೆ
ಹೂವೊಂದು ಅರಳುತ್ತಿದೆ
ಅದರ ಕಟು ಸುವಾಸನೆ
ಮಧುರ ಭಾವ
ಹೊಳೆಯುವ ಕಾಂತಿ
ಸಕಲವನ್ನೂ ತನ್ನದಾಗಿಸಿಕೊಂಡು
ಎಲ್ಲವನ್ನೂ ಮರುಸ್ಥಾಪಿಸಲಿದೆ
Comments are closed.