ರಾಷ್ಟ್ರೀಯ

ಮೂಗು ಮರಳಿ ಪಡೆದ ಬಾಲಕ

Pinterest LinkedIn Tumblr

noseಇಂದೋರ್‌ (ಪಿಟಿಐ): ಪ್ಲಾಸ್ಟಿಕ್‌ ಸರ್ಜರಿ ಮೂಲಕ 12 ವರ್ಷದ ಬಾಲಕನ ಹಣೆಯ ಮೇಲೆ ಮೂಗನ್ನು ಪುನರ್‌ರಚಿಸಿದ ವೈದ್ಯರು ಬಳಿಕ ಅದನ್ನು ಮೂಲಸ್ಥಾನದಲ್ಲಿ ಅಳವಡಿಸಿದ ಅಪರೂಪದ ಘಟನೆ ಇಲ್ಲಿ ನಡೆದಿದೆ.

ಉಜ್ಜಯಿನಿ ಜಿಲ್ಲೆಯ ಅರುಣ್ ಪಟೇಲ್‌ ಎಂಬ ಬಾಲಕ ಒಂದು ತಿಂಗಳ ಮಗುವಾಗಿದ್ದಾಗ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದ ತನ್ನ ಮೂಗನ್ನು ಕಳೆದುಕೊಂಡಿದ್ದ.

ಪ್ಲಾಸ್ಟಿಕ್‌ ಸರ್ಜರಿ ನಡೆಸಿದ ಡಾ. ಅಶ್ವಿನಿ ದಾಶ್‌ ನೇತೃತ್ವದ ತಂಡ, ಆತನಿಗೆ ಪುನಃ ಮೂಗನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ವಿಶಿಷ್ಟ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮೊದಲು ಬಾಲಕನ ಹಣೆಯ ಮೇಲೆ ಮೂಗನ್ನು ಪುನರ್ ರಚಿಸಲಾಯಿತು. ಬಳಿಕ ಅಲ್ಲಿಂದ ತೆಗೆದು ಬಾಯಿ ಮೇಲಿನ ಸೂಕ್ತ ಜಾಗಕ್ಕೆ ಅಳವಡಿಸಲಾಯಿತು ಎಂದು ದಾಶ್‌ ತಿಳಿಸಿದ್ದಾರೆ.

ಈ ಅಪರೂಪದ ಶಸ್ತ್ರಚಿಕಿತ್ಸೆಯು ನಾಲ್ಕು ಹಂತಗಳಲ್ಲಿ ನಡೆದಿದ್ದು, ಅದ ಕ್ಕಾಗಿ ಒಂದು ವರ್ಷ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಬಾಲಕನ ಮೂಗು ಬಹುತೇಕ ಕಣ್ಮರೆಯಾಗಿತ್ತು. ಹೀಗಾಗಿ ಆತನ ಮುಖದ ಮೇಲೆ ಸಾಮಾನ್ಯ ಸಂದರ್ಭಗಳಲ್ಲಿ ಮಾಡುವ ನಾಸಾ ರೂಪ ಶಸ್ತ್ರಚಿಕಿತ್ಸೆಯನ್ನು (ರಿನೊಪ್ಲಾಸ್ಟಿ) ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತನಿಗೆ ವಿಶೇಷ ಪ್ಲಾಸ್ಟಿಕ್ ಸರ್ಜರಿ ನಡೆಸಲು ನಿರ್ಧರಿಸಿದೆವು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಪೂರ್ವ ತಯಾರಿತ ಹಣೆ ನಾಸಾರೂಪ ಶಸ್ತ್ರಚಿಕಿತ್ಸೆ’ ಎನ್ನುತ್ತಾರೆ’’ ಎಂದ ಅವರು ವಿವರಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಮೊದಲ ಹಂತದಲ್ಲಿ ವಿಶೇಷ ಸಿಲಿಕಾನ್‌ ಅಂಗಾಂಶ ವರ್ಧಕವನ್ನು ಬಾಲಕನ ಹಣೆಯ ಮೇಲೆ ಅಳವಡಿಸಲಾಯಿತು. ಹಣೆಯ ಮೇಲಿನ ಅಂಗಾಂಶವು ಬೆಳೆಯುವಂತೆ ವಿಶೇಷ ರಾಸಾಯನಿಕವನ್ನು ಬಳಸಲಾಯಿತು.

ಎರಡನೇ ಹಂತದಲ್ಲಿ ಬಾಲಕನ ಎದೆಯ ಕೆಳಭಾಗದಿಂದ ಸ್ವಲ್ಪ ಮೃದ್ವಸ್ಥಿಯನ್ನು ಹೊರತೆಗೆದು ಕೃತಕ ಮೂಗನ್ನು ರಚಿಸಲಾಯಿತು. ಬಳಿಕ ಮೂರು ತಿಂಗಳವರೆಗೆ ಅದನ್ನು ಹಣೆಯ ಮೇಲೆ ಅಳವಡಿಸಲಾಯಿತು. ಇದರಿಂದ ದೇಹದ ಇತರೆ ಭಾಗಗಳಂತೆಯೇ ಅಲ್ಲಿಗೂ ರಕ್ತ ಸಂಚಾರ ಪ್ರಾರಂಭವಾಗಿ ಅಂಗಾಂಶ ಕ್ರಿಯಾಶೀಲವಾಯಿತು.

ಮೂರನೇ ಹಂತದಲ್ಲಿ ಹಣೆಯ ಮೇಲೆ ಬೆಳೆದಿದ್ದ ಮೂಗನ್ನು ತೆಗೆದು ಮುಖದ ಮೂಲಸ್ಥಾನಕ್ಕೆ ಅಳವಡಿಸಲಾಯಿತು. ಜತೆಗೆ ನರಗಳನ್ನು ಅದಕ್ಕೆ ಸಂಪರ್ಕಿಸಿ ಸಹಜ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ನಾಲ್ಕನೇ ಹಂತದಲ್ಲಿ ಮೂಗನ್ನು ಬೆಳೆಸಿದ್ದ ಹಣೆಯ ಭಾಗವನ್ನು ಸಹಜ ಸ್ಥಿತಿಗೆ ತರಲಾಯಿತು. 6ನೇ ತರಗತಿ ಓದುತ್ತಿರುವ ಅರುಣ್‌, ಹೊಸ ಮೂಗು ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ.

‘ಮುಖದಲ್ಲಿ ಮೂಗು ಇಲ್ಲದ ಕಾರಣ ಕನ್ನಡಿಯ ಮುಂದೆ ನಿಲ್ಲಲೂ ಧೈರ್ಯ ಇರಲಿಲ್ಲ. ರಸ್ತೆಯಲ್ಲಿ ಯಾವಾಗಲೂ ಮುಖ ಬಗ್ಗಿಸಿಕೊಂಡು ನಡೆಯುತ್ತಿದ್ದೆ. ಶಾಲೆಯಲ್ಲಿ ಮಕ್ಕಳು ನನ್ನನ್ನು ಕಂಡರೆ ಹೆದರುತ್ತಿದ್ದರು ಮತ್ತು ಅಣಕವಾಡುತ್ತಿದ್ದರು. ಆದರೆ ಈಗ ಹೊಸ ಮೂಗು ಬಂದಿರುವುದರಿಂದ ಜನರನ್ನು ಆತ್ಮವಿಶ್ವಾಸದಿಂದ ಎದುರಿಸ ಬಲ್ಲೆ’ ಎಂದಿದ್ದಾನೆ ಅರುಣ್‌.

* ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದ ಮೂಗನ್ನು ಕಳೆದುಕೊಂಡಿದ್ದ ಅರುಣ್ ಪಟೇಲ್‌

* ಪ್ಲಾಸ್ಟಿಕ್‌ ಸರ್ಜರಿ ನಡೆಸಿದ ಡಾ. ಅಶ್ವಿನಿ ದಾಶ್‌ ನೇತೃತ್ವದ ತಂಡ
* ವೈದ್ಯಕೀಯ ಭಾಷೆಯಲ್ಲಿ ‘ಪೂರ್ವ ತಯಾರಿತ ಹಣೆ ನಾಸಾರೂಪ ಶಸ್ತ್ರಚಿಕಿತ್ಸೆ’ ಎಂಬ ಹೆಸರು

Comments are closed.