ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧಪಡಿಸಿರುವ ‘ಪ್ರಾದೇಶಿಕ ಸಂಪರ್ಕ ಯೋಜನೆ’ಯ ಕರಡಿನಲ್ಲಿ ರಾಜ್ಯದಲ್ಲಿ ಕಡಿಮೆ ಬಳಕೆಯಾಗುತ್ತಿರುವ 15 ವಿಮಾನ ನಿಲ್ದಾಣಗಳು, ರನ್ವೇಗಳು ಸ್ಥಾನ ಪಡೆದಿವೆ.
ಇದುವರೆಗೆ ವಿಮಾನ ಸಂಪರ್ಕವನ್ನು ಕಾಣದ ಪ್ರದೇಶಗಳಿಗೆ ಆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಚಿವಾಲಯ ಯೋಜನೆ ರೂಪಿಸಿದೆ. ಇದರ ಅಡಿ, ಬಳಕೆಯಲ್ಲಿ ಇಲ್ಲದ ಮತ್ತು ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳು, ರನ್ವೇಗಳಿಂದ ವಿಮಾನ ಸಂಚಾರ ಆರಂಭಿಸಲು ರಾಜ್ಯ ಸರ್ಕಾರ ಖಾಸಗಿ ಕಂಪೆನಿಗಳ ಮನವೊಲಿಸಲು ಅವಕಾಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಈ ಯೋಜನೆಯ ವ್ಯಾಪ್ತಿಗೆ ತರಬಹುದಾದ ಅತಿ ಹೆಚ್ಚಿನ ನಿಲ್ದಾಣಗಳು, ರನ್ವೇಗಳು ಇರುವುದು ಕರ್ನಾಟಕದಲ್ಲಿ. ಬಳಕೆಯಲ್ಲಿ ಇಲ್ಲದ ಅಥವಾ ತೀರಾ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಈ ನಿಲ್ದಾಣ, ರನ್ವೇಗಳಿಂದ ಇನ್ನೊಂದು ಊರಿಗೆ ವಿಮಾನ ಸಂಪರ್ಕ ಕಲ್ಪಿಸುವ ಕಂಪೆನಿಗಳಿಗೆ ಈ ಯೋಜನೆಯ ಅಡಿ ಹಣಕಾಸಿನ ನೆರವು ಸಿಗುತ್ತದೆ. ತೆರಿಗೆ ವಿನಾಯಿತಿ ಕೂಡ ಲಭ್ಯವಾಗುತ್ತದೆ.
ವಿಮಾನ ಇಂಧನದ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯ ಸರ್ಕಾರಗಳು ಶೇಕಡ 1ಕ್ಕೆ ಮಿತಿಗೊಳಿಸ ಬೇಕಾಗುತ್ತದೆ. ಈ ವಿಮಾನ ನಿಲ್ದಾಣ, ರನ್ವೇಗಳಲ್ಲಿ ಯಾವುದೇ ಚಟುವಟಿಕೆ ಇಲ್ಲ ಹಾಗಾಗಿ ಇಷ್ಟು ವಿನಾಯಿತಿ ನೀಡುವುದರಿಂದ ರಾಜ್ಯಗಳಿಗೆ ನಷ್ಟ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಎಲ್ಲೆಲ್ಲಿವೆ ರನ್ವೇ, ನಿಲ್ದಾಣಗಳು?
ಅಮ್ಮಸಂದ್ರ (ತುರುವೇಕೆರೆ ತಾಲ್ಲೂಕು), ಬಲ್ಡೋಟ/ಕೊಪ್ಪಳ, ಬಳ್ಳಾರಿ, ಬೀದರ್, ಗಿಣಿಗೇರ (ಹೊಸಪೇಟೆ), ಹಾಸನ, ಜಕ್ಕೂರು, ಕೋಲಾರ, ಮೈಸೂರು (ಮಂಡಕಳ್ಳಿ), ರಾಯಚೂರು, ಶಹಾಬಾದ್, ವಿದ್ಯಾನಗರ (ತೋರಣಗಲ್ಲು), ಯಾದಗಿರಿ, ಯಲಹಂಕ.
Comments are closed.