
ಮಂಗಳೂರು,ಜು.04: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದೇಶದಲ್ಲಿಯೆ ಪ್ರಥಮ ಬಾರಿಗೆ 50 ಬೆಡ್‌ಗಳ ಆಯುಶ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಶೀಘ್ರದಲ್ಲಿ ಅರಂಭಿಸಲು ಅನುಮತಿ ನೀಡಿರುವುದು ಆರೋಗ್ಯ ಸಚಿವನಾಗಿ ತೃಪ್ತಿ ನೀಡಿದೆ. ಆಹಾರ ಇಲಾಖೆಯ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಇಂದು ನಗರದ ವೆನ್ಲಾಕ್ ಆವರಣದಲ್ಲಿ ಆಯುಷ್ ಫೌಂಡೇಶನ್ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ವೈದ್ಯರ ಮತ್ತು ಪ್ರತಿಭಾವಂತ ಯುವ ವೈದ್ಯರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಈಗಾಗಲೆ ಈ ವಿಭಾಗಕ್ಕೆ ವೈದ್ಯರ ನೇಮಕಾತಿಗೆ ಸರಕಾರ ಆದೇಶ ನೀಡಿದೆ. ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಜನರ ನಿರೀಕ್ಷೆಯಂತೆ ಇಲ್ಲೊಂದು ಆರ್ಯುವೇದ, ಯುನಾನಿ, ಹೋಮಿಯೋಪತಿಯನ್ನೊಳಗೊಂಡ ಆಯುಶ್ ಆಸ್ಪತ್ರೆ ಆಗಬೇಕೆಂದು ಆಶಿಸಿದ್ದೆ. ಸರಕಾರದ ವತಿಯಿಂದ ಈ ಕೆಲಸ ನಡೆಸಲು ಸಾಧ್ಯವಾಗಿರುವುದು ನನಗೆ ತೃಪ್ತಿ ನೀಡಿದೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯಲ್ಲಿ ಆಯುಶ್ ಆಸ್ಪತ್ರೆಗಳಿಗೆ ಜನರ ಬೆಂಬಲ ದೊರೆಯಲಿದೆ ಎನ್ನುವ ವಿಶ್ವಾಸ ತನಗಿರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಆರೊಗ್ಯ-ಆಹಾರ ಇಲಾಖೆಗಳು ಪರಸ್ಪರ ಪೂರಕ:
ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಯಾದ ಬಳಿಕ ಆರೋಗ್ಯ ಸಚಿವ ಯು.ಟಿ.ಖಾದರ್ ಆಹಾರ ಮತ್ತು ನಾಗರಿಕ ಪೂರೈಕೆಯ ಸಚಿವರಾಗಿ ಬದಲಾವಣೆ ಹೊಂದಿದ್ದರೂ ಈ ರೀತಿಯ ಖಾತೆ ಬದಲಾವಣೆಯಿಂದ ತನಗೆ ಯಾವುದೇ ಬೇಸರವಾಗಿಲ್ಲ. ಜನರಿಗೆ ಇನ್ನೂ ಹತ್ತಿರವಾಗಿ ಕೆಲಸ ಮಾಡಬೇಕೆನ್ನುವುದು ನನ್ನ ಇಂಗಿತವಾಗಿತ್ತು. ಹಿಂದಿನ ಖಾತೆಗೂ ಪ್ರಸಕ್ತ ವಹಿಸಿಕೊಂಡಿರುವ ಖಾತೆ ಪರಸ್ಪರ ನಿಕಟ ಸಂಬಂಧವಿದೆ.
ಜನರಿಗೆ ಉತ್ತಮ ಆಹಾರ ದೊರೆತರೆ ಅವರಿಗೆ ಅನಾರೋಗ್ಯದ ಸಮಸ್ಯೆ ಇರುವುದಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಜನಸಾಮಾನ್ಯರಿಗೆ ಸಹಾಯವಾಗುವ ಸಾಕಷ್ಟು ಕೆಲಸ ಮಾಡಲು ಸಾಧ್ಯವಿದೆ. ಆದ್ದರಿಂದ ಹಾಲಿ ಖಾತೆಯ ಬಗ್ಗೆಯೂ ನನಗೆ ಮೆಚ್ಚುಗೆಯಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಸಮಾರಂಭದಲ್ಲಿ ಆಯುಶ್ ಫೌಂಡೇಶನ್ನಿನ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಸ್ವಾಗತಿಸಿದರು. ನಿಟ್ಟೆ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ರಮಾನಂದ ಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಾ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್, ಜಿಲ್ಲಾ ಆಯುಶ್ ಅಧಿಕಾರಿ ಡಾ.ಮುಹಮ್ಮದ್ ಇಕ್ಭಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಶೋಭಾರಾಣಿ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವೈದ್ಯರಾದ ಡಾ.ರಾಮಾನುಜಂ, ವಿಷ್ಣು ಮೂರ್ತಿ ಶರ್ಮ, ಡಾ.ಶ್ರೀಕೃಷ್ಣ ಭಟ್ ಬೆಟ್ಟಂಪಾಡಿ, ಎಂ.ಎಸ್.ಭಟ್ ಬಂಟ್ವಾಳ, ಡಾ.ಹರಿಪ್ರಕಾಶ್ ಸುಳ್ಯ, ಡಾ.ಶ್ರೀಪತಿ ಭಟ್ ಉಡುಪಿ, ಡಾ.ಶ್ರೀನಿವಾಸ ಶೆಟ್ಟಿ ಕುಂದಾಪುರ, ಡಾ.ಸುನಂದ ಪೈ, ಡಾ.ಪ್ರಶಾಂತ್ ಶೆಟ್ಟಿ, ಡಾ.ಸನ್ನಿ ಮಾಥ್ಯು, ಡಾ.ಕೆ.ಎಸ್.ಐತಾಳ್, ಆಯುಶ್ ಇಲಾಖೆಯ ಡಾ.ಸೈಯದ್ ಝಾಹಿದ್ ಹುಸೈನ್, ಡಾ.ಮುಹಮ್ಮದ್ ಇಕ್ಭಾಲ್ ಹಾಗೂ ಯುವ ವೈದ್ಯರಾದ ಡಾ.ರಿಯಾ, ಡಾ.ಕೀರ್ತನಾ, ಡಾ.ಅಂಜು ಮಹಾಜನ್ ಮೊದಲಾದವರನ್ನು ಸಮಾರಂಭದಲ್ಲಿ ಅತಿಥಿಗಳು ಸ್ಮರಣಿಕೆ ನೀಡಿ ಸನ್ಮಾನಿಸಿದರು.
Comments are closed.