ಕರಾವಳಿ

‘ಇದು ರಸ್ತೆಯಲ್ಲ ಕೆಸರುಗದ್ದೆ’; ಸಂಚಾರಕ್ಕೆ ದುಸ್ತರವಾದ ಗಂಗೊಳ್ಳಿ ಗುಜ್ಜಾಡಿ ಕಳಿಹಿತ್ಲು ರಸ್ತೆ

Pinterest LinkedIn Tumblr

ಕುಂದಾಪುರ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಹಿತ್ಲು ರಸ್ತೆಯು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಈ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ದುಸ್ತರವಾಗಿದೆ. ಕಳಿಹಿತ್ಲು ಪರಿಸರದಲ್ಲಿ ಸುಮಾರು 60ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು ತಮ್ಮ ದಿನಿತ್ಯದ ಅವಶ್ಯಕತೆಗಳಿಗೆ ಗುಜ್ಜಾಡಿ ಪೇಟೆಯನ್ನು ಅವಲಂಬಿಸಿದ್ದಾರೆ. ಕಳಿಹಿತ್ಲುವಿನಿಂದ ಗುಜ್ಜಾಡಿಗೆ ಬರಲು ಇರುವ ಏಕೈಕ ರಸ್ತೆಯಾಗಿರುವ ಈ ರಸ್ತೆಯು ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಹಾನಿಯಾಗುತ್ತಿತ್ತು. ಪ್ರತಿವರ್ಷ ಅಲ್ಪಸ್ವಲ್ಪ ಹಾನಿಗೊಳಗಾಗುತ್ತಿದ್ದ ಈ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ದುರಸ್ಥಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿತ್ತು.

?

?

ಕಳೆದ ವರ್ಷ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಶಾಸಕರ ನಿಧಿಯಿಂದ ಸುಮಾರು 3 ಲಕ್ಷ ರೂ. ಮಂಜೂರಾಗಿದ್ದು, ಈ ಅನುದಾನವನ್ನು ಬಳಸಿಕೊಂಡು ರಸ್ತೆಯುದ್ಧಕ್ಕೂ ಒಂದು ಒಂದು ಅಡಿಯಷ್ಟು ಕೆಂಪು ಮಣ್ಣು ಹಾಕಿ ರಸ್ತೆಯ ಅಭಿವೃದ್ಧಿಪಡಿಸಲಾಗಿತ್ತು ಎನ್ನಲಾಗಿದೆ. ಆದರೆ ಇತ್ತೀಚಿಗೆ ಸುರಿದ ಧಾರಾಕರ ಮಳೆಗೆ ಇಡೀ ಕಳಿಹಿತ್ಲು ರಸ್ತೆ ರಸ್ತೆಯೇ ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿ ಮಾರ್ಪಾಡಾಗಿದೆ. ರಸ್ತೆಯ ಮೇಲೆ ಜನರು ನಡೆದಾಡಲು ಕಷ್ಟಪಡುತ್ತಿದ್ದರೆ, ಆಟೋ ರಿಕ್ಷಾ ಸಹಿತ ವಿವಿಧ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ಸಮಸ್ಯೆಯ ಗಂಭೀರತೆಯನ್ನು ಅರಿತು ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಇಂಜಿಯರ್ ಅವರು ರಸ್ತೆಯ ಮೇಲೆ ಎದ್ದಿರುವ ಕೆಸರನ್ನು ಜೆಸಿಬಿ ಮೂಲಕ ತೆಗೆಯುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇದರ ಪರಿಣಾಮ ಜೆಸಿಬಿ ಬಳಸಿ ರಸ್ತೆಯ ಮೇಲಿನ ಮಣ್ಣಿನ ಕೆಸರು ತೆಗೆಯುತ್ತಿದ್ದಂತೆಯೇ ರಸ್ತೆ ಮತ್ತಷ್ಟು ಹಾನಿಗೊಳಗಾಗಿದೆ. ಇದೀಗ ಈ ರಸ್ತೆಯ ಮೇಲಿನ ಸಂಚಾರ ಬಹಳಷ್ಟು ತ್ರಾಸದಾಯವಾಗಿದ್ದು ಜನರು ಹಿಡಿಶಾಪ ಹಾಕಲಾರಂಭಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಎಡವಟ್ಟಿನಿಂದ ಉತ್ತಮವಾಗಿದ್ದ ಈ ರಸ್ತೆ ಇದೀಗ ಇನ್ನಷ್ಟು ಹದಗೆಡುವಂತಾಗಿದೆ. ಸರಕಾರದ ಹಣವನ್ನು ಅನಾವಶ್ಯಕವಾಗಿ ನೀರಿನಿಂತೆ ಖರ್ಚು ಮಾಡಲಾಗುತ್ತಿದೆ. ಜನರಿಗೆ ಉಪಯೋಗವಾಗುವಂತೆ, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಬದಲು ತಮ್ಮ ಮನಬಂದಂತೆ ರಸ್ತೆಯ ಮೇಲೆ ಕೆಂಪು ಮಣ್ಣು ಹಾಕಿ, ಮಳೆಗಾಲದಲ್ಲಿ ಈ ರಸ್ತೆಯ ನಿಜ ಬಣ್ಣ ಬಯಲಾದ ಬಳಿಕ ಆ ಮಣ್ಣನ್ನು ತೆರವುಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಕರಲ್ಲಿ ಮೂಡಿದೆ. ಸ್ಥಳೀಯ ಗ್ರಾಮ ಪಂಚಾಯತ್ ಕೂಡ ಅನುದಾನದ ಕೊರತೆಯಿಂದ ಸುಮಾರು 1.5-2 ಕಿ.ಮೀ ಉದ್ದದ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿಗೊಳಿಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದೆ.

ಸಂಪೂರ್ಣವಾಗಿ ಹದಗೆಟ್ಟಿರುವ ಗುಜ್ಜಾಡಿ ಕಳಿಹಿತ್ಲು ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿಗೊಳಿಸಿ ಜನರ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Comments are closed.