ನವದೆಹಲಿ: ಅದು ಪಾಳು ಬಿದ್ದ ಮನೆ! ತಾರಸಿಯೇ ಇಲ್ಲದ ಆ ಮನೆಯ ಒಳಗೆ ಮತ್ತು ಹೊರಗೆ ಗಿಡಗಂಟೆಗಳು ಬೆಳೆದು ನಿಂತಿವೆ. ಸದ್ಯ ಆ ಪಾಳು ಮನೆಯಲ್ಲಿ ಚಿರತೆ ಮತ್ತು ಕರಡಿಗಳು ವಾಸ ಮಾಡುತ್ತಿವೆ!
ಪಶ್ಚಿಮ ಬಂಗಾಳ ಅಥವಾ ಉತ್ತರಾಖಂಡ ಸರ್ಕಾರಗಳು ಮಾತ್ರ ಈ ಮನೆಯ ಕಡೆ ಗಮನ ನೀಡುತ್ತಿಲ್ಲ!
ಈ ಮನೆಗೂ ಮತ್ತು ಸರ್ಕಾರಕ್ಕೂ ಏನು ಸಂಬಂಧ ಅಂದುಕೊಂಡಿರಾ? ಈ ಪಾಳು ಬಿದ್ದ ಮನೆಯಲ್ಲಿ ನೊಬೆಲ್ ಪುರಸ್ಕೃತ ಕವಿ ಹಾಗೂ ಗುರುದೇವ ಎಂದೇ ಖ್ಯಾತರಾಗಿದ್ದ ರವೀಂದ್ರನಾಥ್ ಠಾಗೋರ್ ವಾಸವಿದ್ದರು. ಗೀತಾಂಜಲಿ ಎಂಬ ವಿಶ್ವ ವಿಖ್ಯಾತ ಕೃತಿಯನ್ನು ಅವರು ರಚಿಸಿದ್ದು ಈ ಪಾಳು ಬಿದ್ದ ಮನೆಯಲ್ಲಿ ಎಂಬುದು ಮತ್ತೊಂದು ವಿಶೇಷ.
ಉತ್ತರಾಖಂಡ ರಾಜ್ಯದ ನೈನಿತಾಲ್ನಿಂದ 32 ಕಿ.ಮೀಟರ್ ದೂರದಲ್ಲಿರುವ ಮಹೇಶ್ ಖಾನ್ ಅರಣ್ಯ ಪ್ರದೇಶದಲ್ಲಿ ಈ ಮನೆ ಇದೆ. 1904 –08 ರಲ್ಲಿ ರವೀಂದ್ರನಾಥ್ ಠಾಗೋರ್ ತಮ್ಮ ಪುತ್ರಿ ರೇಣುಕಾ ಅವರೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದರು.
ಈ ಮನೆಯಲ್ಲೇ ಅವರಿಗೆ ಗೀತಾಂಜಲಿ ಕೃತಿ ರಚಿಸಲು ಸ್ಫೂರ್ತಿ ದೊರೆತ್ತಿದ್ದು ಎಂದು ಕೋಲ್ಕತ್ತಾ ಮೂಲದ ಇತಿಹಾಸಕಾರರು ತಿಳಿಸುತ್ತಾರೆ.
ಅಂತಿಮವಾಗಿ ಇದೇ ಮನೆಯಲ್ಲೇ ಅವರು ಗೀತಾಂಜಲಿ ಕೃತಿಯನ್ನು ಬರೆದು ಮುಗಿಸಿದರು ಎಂದು ರೇಣುಕಾ ಕೆಲವು ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಸ್ಮಾರಕವಾಗ ಬೇಕಿದ್ದ ಈ ಮನೆ ಪಾಳು ಬಿದ್ದಿದೆ.
Comments are closed.