ಅಂತರಾಷ್ಟ್ರೀಯ

ಈ ಬಾಲಕನ ವಯಸ್ಸು ಕೇವಲ 10, ಮೈಭಾರ ಈಗ ಬರೋಬ್ಬರಿ ಕೆಜಿ 190!

Pinterest LinkedIn Tumblr

Arya-Webಇಂಡೋನೇಷ್ಯಾ: 10 ವರ್ಷದ ಬಾಲಕ ಅಬ್ಬಬ್ಬಾ ಅಂದರೆ ಅದೆಷ್ಟು ಭಾರ ಇರಬಹುದು? 20, 30, 40, 50, 100… ಇದಾವುದೂ ಅಲ್ಲ, ಬರೋಬ್ಬರಿ 192 ಕೆಜಿ ಅಂದರೂ ಈಗ ನಂಬಲೇ ಬೇಕು. ಯಾಕೆ ಎನ್ನುತ್ತೀರಾ? ಇಲ್ಲಿದ್ದಾನೆ ನೋಡಿ ವಿಶ್ವದ ಸ್ಥೂಲಕಾಯ ಬಾಲಕ. ಈತನ ಮೈಭಾರ 192 ಕಿಲೋ ಗ್ರಾಂ!

ಇಂಡೋನೇಷ್ಯಾದ ಪೂರ್ವ ಜಾವ ಪ್ರಾಂತ್ಯದಲ್ಲಿ 10 ವರ್ಷದ ಬಾಲಕ ಆರ್ಯ ಪೆರ್ವನ ಕಳೆದ ಕೆಲ ವರ್ಷಗಳಿಂದ ನಿಯಂತ್ರಿಸಲಾಗದ ರೀತಿಯಲ್ಲಿ ಬೆಳೆಯುತ್ತಿದ್ದಾನೆ. ವೈದ್ಯಲೋಕವೇ ಅಚ್ಚರಿಗೊಳಗಾಗುವಂತೆ ಬೆಳೆದಿದ್ದಾನೆ.

ಅಷ್ಟಕ್ಕೂ ಯಾಕೆ ಹೀಗೆ ಬೆಳೆದಿದ್ದಾನೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಉತ್ತರ ಇಷ್ಟೆ, ದಿನಕ್ಕೆ ಐದು ಬಾರಿ ಹಂದಿ ಮಾಂಸದ ಊಟ, ತರಕಾರಿ ಸೂಪ್, ಅನ್ನ ಮತ್ತು ಇಂಡೋನೇಷ್ಯಾದ ಸಾಂಪ್ರದಾಯಿಕ ಆಹಾರ ಟೆಂಪ್ ಸೇವನೆ ಮಾಡಿದರೆ ಇನ್ನೇನಾಗಬೇಕು ಹೇಳಿ. ಆರ್ಯನಿಗೆ ಈಗಲೂ ಇಷ್ಟು ಆಹಾರ ಬೇಕೇಬೇಕು ಎನ್ನುವ ಮಟ್ಟಕ್ಕೆ ಆಹಾರ ಸೇವನೆ ರೂಢಿಸಿಕೊಂಡಿದ್ದಾನೆ. ಸದ್ಯ ಡಯೆಟ್ ಮಾಡುತ್ತಿರುವುದಾಗಿ ಹೇಳುತ್ತಾನಾದರೂ ಅದನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡಿಲ್ಲ.

ಸ್ವಲ್ಪ ದೂರವೂ ನಡೆಯಲಾಗದ ರೀತಿಯಲ್ಲಿ ಬೆಳೆದುನಿಂತಿರುವ ಆರ್ಯ ಇದೇ ಕಾರಣಕ್ಕಾಗಿ ಈಗ ಶಾಲೆಗೂ ಹೋಗುತ್ತಿಲ್ಲ. ಆತನಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ನಡೆಯುವುದೆಂದರೆ ಆತನಿಗೆ ಸಿಟ್ಟು ಬರುತ್ತಿದೆ ಎನ್ನುತ್ತಾಳೆ ಆತನ ತಾಯಿ.

ಇಬ್ಬರು ಹಿರಿಯರು ತಿನ್ನುವಷ್ಟು ಊಟ ಮಾಡ್ತಾನೆ!

ಅಚ್ಚರಿ ಎನಿಸಿದರೂ ಇದು ಸತ್ಯ. ಆತನ ತಾಯಿ ರೊಕಾಯ್ ಹೇಳುವಂತೆ, ‘ಎಷ್ಟೇ ಹೇಳಿದರೂ ಸರಿಯಾಗಿ ಡಯೆಟ್ ಮಾಡಲ್ಲ. ಈಗಲೂ ಇಬ್ಬರು ಪುರುಷರು ಊಟ ಮಾಡುವಷ್ಟು ಒಮ್ಮೆ ತಿನ್ನುತ್ತಾನೆ. ನನಗೆ ಆತನ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನನಗೆ ಬೇರೆ ದಾರಿಯೇ ತೋಚುತ್ತಿಲ್ಲ. ಮೈಭಾರ ಇಳಿಸುವುದು ಹೇಗೆ ಎನ್ನುವುದೇ ಸಮಸ್ಯೆಯಾಗಿದೆ. ಆಹಾರ ಕಡಿಮೆ ಮಾಡಿಸುವುದಾದರೂ ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಇನ್ನೊಬ್ಬರ ಆಧಾರವಿಲ್ಲದೇ ಒಂದೇ ಒಂದು ಹೆಜ್ಜೆ ಇಡಲಾಗದ ಸ್ಥಿತಿ ಇದೆ. ಆತ ಬೇರೆ ಮಕ್ಕಳ ರೀತಿಯಲ್ಲೇ ಆಟವಾಡಬೇಕು, ಓದಬೇಕು ಎನ್ನುವ ಕನಸು ನನ್ನದು. ಆದರೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾಳೆ.

35 ವರ್ಷದ ತಾಯಿ ರೊಕಾಯ್ ಮತ್ತು ತಂದೆ ಅಡೆ ಸೋಮಾಂತ್ರಿ ದಂಪತಿಯ ಎರಡನೇ ಮಗ ಆರ್ಯ. ಹುಟ್ಟುವಾಗ ಸಹಜವಾಗಿಯೇ ಇದ್ದ ಬಾಲಕ ಎರಡನೇ ವರ್ಷದ ಬಳಿಕ ದಿನ ಕಳೆದಂತೆ ಈ ಪರಿ ಬೆಳೆದುನಿಂತಿದ್ದಾನೆ ಎನ್ನುತ್ತಾರೆ ತಂದೆ-ತಾಯಿ.

ಈಗಾಗಲೇ ಸಾಕಷ್ಟು ವೈದ್ಯರಿಗೆ ತೋರಿಸಿದ್ದೂ, ಯಾವುದೇ ಪ್ರಯೋಜನ ಆಗಿಲ್ಲ. ಆತನ ಆಹಾರ ಪದ್ಧತಿಯಲ್ಲೂ ನಿಯಂತ್ರಣ ಸಾಧ್ಯವಾಗಿಲ್ಲ. ಯಾರಾದರೂ ನೆರವಾಗುತ್ತಾರಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.

Comments are closed.