ಬೆಂಗಳೂರು, ಜೂ.೩೦: ರಾಜ್ಯ ಬಿಜೆಪಿಯ ಭಿನ್ನಮತ ಮತ್ತಷ್ಟು ಉಲ್ಭಣಗೊಂಡಿದ್ದು, ಇದೀಗ ಇದು ದೆಹಲಿಗೆ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಪದಾಧಿಕಾರಿಗಳ ನೇಮಕ ಸಂದರ್ಭ ಬಿಎಸ್‌ವೈ ಆಪ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂಬ ಅಸಮಾಧಾನವನ್ನು ಪಕ್ಷದ ರಾಷ್ಟ್ರೀಯ ಮುಖಂಡರಿಗೆ ತಿಳಿಸಲು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ದೆಹಲಿಗೆ ತೆರಳಲು ತಯಾರಿ ನಡೆಸಿದ್ದಾರೆ.
ನಾಳೆ ದೆಹಲಿಗೆ ತೆರಳಲಿರುವ ಈಶ್ವರಪ್ಪ ಅವರು ವರಿಷ್ಠರನ್ನು ಭೇಟಿ ಮಾಡಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿ ರಾಜ್ಯದಲ್ಲಾಗುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿವರಿಸಿ ಮರಳಿರುವ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಆದರೆ ಈಗ ಈಶ್ವರಪ್ಪ ಭಿನ್ನಮತ ವಿಚಾರವಾಗಿ ವರಿಷ್ಠರನ್ನೇ ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿರುವುದು ಭಿನ್ನಮತ ತಾರಕಕ್ಕೇರುವ ಸಾಧ್ಯತೆ ಇದೆ.
ಯಡಿಯೂರಪ್ಪ ಅವರೂ ಈ ವಿಚಾರವಾಗಿ ವರಿಷ್ಠರ ಎದುರಲ್ಲಿಯೇ ಚರ್ಚೆಯಾಗಲಿ ಎಂದು ಹೇಳಿರುವ ಕಾರಣ ಶುಕ್ರವಾರ ನವದೆಹಲಿಯಲ್ಲಿಯೇ ಈ ಬಗ್ಗೆ ಇನ್ನಷ್ಟು ಮಾತುಕತೆ ನಡೆಯಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕೆಜೆಪಿಯಿಂದ ವಲಸೆ ಬಂದಿರುವ ಮುಖಂಡರು ಹಾಗೂ ಕಾರ್ಯಕರ್ತರಿಗೇ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂದು ಆಪಾದಿಸಿರುವ ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಅಸಮಾಧಾನ ಮತ್ತಷ್ಟು ಹೆಚ್ಚಾಗಿದ್ದು, ದೆಹಲಿ ನಾಯಕರ ಗಮನಕ್ಕೆ ತರಲು ಭಿನ್ನರು ಮುಂದಾಗಿದ್ದಾರೆ.
ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವ ಮೊದಲು ಸಂಬಂಧಪಟ್ಟ ಪ್ರಮುಖರೊಂದಿಗೆ ಚರ್ಚಿಸಲಾಗಿದೆ. ಹೀಗಾಗಿ ಯಾವುದೇ ಹಂತದ ಪದಾಧಿಕಾರಿಗಳ ಪಟ್ಟಿಯಲ್ಲೂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಬೇಕಾದರೆ ಇನ್ನೂ ಕೆಲವರಿಗೆ ಈಗಿರುವ ಸಮಿತಿಗಳಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದ್ದರು. ಇದರಿಂದ ಭಿನ್ನರ ಗುಂಪು ಮತ್ತಷ್ಟು ಕೆರಳಿದ್ದು, ನೇರವಾಗಿ ರಾಷ್ಟ್ರೀಯ ನಾಯಕರ ಗಮನಕ್ಕೆ ತರಲು ಮುಂದಾಗಿದೆ.
ಈಗಾಗಲೇ ಕೆ.ಎಸ್.ಈಶ್ವರಪ್ಪ ದೆಹಲಿ ನಾಯಕರನ್ನು ಸಂಪರ್ಕಿಸಿ ಭೇಟಿಗೆ ಸಮಯ ಕೇಳಿದ್ದಾರೆ. ಸಮಯ ದೊರೆತರೆ ತಕ್ಷಣ ದೆಹಲಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ.
ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ನೇಮಕ ಸೇರಿದಂತೆ ಯಾವುದೇ ಬೆಳವಣಿಗೆಗಳಲ್ಲಿ ತಮ್ಮ ಹಸ್ತಕ್ಷೇಪ ಇಲ್ಲ ಎಂದು ಸಂಸದೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದರೂ ಅದನ್ನು ಕೇಳಿಸಿಕೊಳ್ಳಲು ಯಾರೂ ತಯಾರಿಲ್ಲ. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಶೋಭಾ ಕರಂದ್ಲಾಜೆ ಅವರು ಎಲ್ಲಾ ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಹೆಚ್ಚಿನ ಭಿನ್ನರ ಆರೋಪವಾಗಿದೆ.
ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ ಸಂದರ್ಭ ಯಾವ ರೀತಿಯ ತಾರತಮ್ಯವಾಗಿದೆ, ಕೆಜೆಪಿಯಿಂದ ವಲಸೆ ಬಂದಿರುವವರಿಗೆ ಎಲ್ಲೆಲ್ಲಿ, ಎಷ್ಟರ ಮಟ್ಟಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೇಗೆ ಅನ್ಯಾಯವಾಗಿದೆ ಎಂಬುದರ ಬಗ್ಗೆ ವಿವಿಧ ಜಿಲ್ಲೆಗಳಿಂದ ಮಾಹಿತಿ ಕಲೆ ಹಾಕಿರುವ ಈಶ್ವರಪ್ಪ, ಅವುಗಳನ್ನೆಲ್ಲಾ ರಾಷ್ಟ್ರೀಯ ಮುಖಂಡರ ಗಮನಕ್ಕೆ ತರಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಲು ಅವರು ಮುಂದಾಗಿದ್ದಾರೆ.
Comments are closed.