
ಬೆಂಗಳೂರು, ಜೂ. ೨೯- ಪಡಿತರ ಚೀಟಿ ಪಡೆಯಲು ಈಗಿರುವ 14 ಷರತ್ತುಗಳನ್ನು ರದ್ದು ಮಾಡಿ ಜನಪರವಾದ ಹೊಸ ಪಡಿತರ ಚೀಟಿ ವಿತರಣಾ ನೀತಿಯನ್ನು ಇನ್ನು ಮೂರು ತಿಂಗಳಲ್ಲಿ ಜಾರಿಗೊಳಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು.
ಆಹಾರ ಇಲಾಖೆಯ ಸಚಿವರಾದ ಮೇಲೆ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಗೆ ಈಗಿರುವ 14 ಷರತ್ತುಗಳನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.
ಜನರಿಗೆ ಅನುಕೂಲವಾಗುವಂತೆ ಕೇವಲ ೪ ಷರತ್ತುಗಳಿರುವ ಹೊಸ ನೀತಿಯನ್ನು ರೂಪಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ಪಡಿತರ ಚೀಟಿ ಪಡೆಯಲು ಈಗ ಅರ್ಜಿ ಜತೆಗೆ ಆರ್ಆರ್ ನಂಬರ್, ಮತದಾರರ ಗುರುತಿನ ಚೀಟಿ, ಮತ್ತಿತರ ದಾಖಲೆಗಳನ್ನು ನೀಡುವುದನ್ನು ವಾಪಸ್ ಪಡೆಯಲಾಗಿದ್ದು, ಕೇವಲ ಆಧಾರ್ ಸಂಖ್ಯೆ ನೀಡಿ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದರು.
ಪಡಿತರ ಚೀಟಿ ವಿತರಣೆಯ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದು., ಮೂರು ತಿಂಗಳಲ್ಲಿ ಈ ಎಲ್ಲವೂ ಅನುಷ್ಠಾನವಾಗಲಿದೆ ಎಂದರು.
ಚೀಟಿ ವಿತರಣೆ
ಪಡಿತರ ಚೀಟಿ ಪಡೆಯಲು ಹೊಸದಾಗಿ ೧೦ ಲಕ್ಷ ಅರ್ಜಿಗಳು ಬಂದಿವೆ. ಜತೆಗೆ ಹೊಸ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿದೆ. ಹಾಗಾಗಿ ಇನ್ನು ಮೂರು ತಿಂಗಳಲ್ಲಿ ಈ ೧೦ ಲಕ್ಷ ಪಡಿತರ ಚೀಟಿ ಕೋರಿ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಜತೆಗೆ ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಹಾಕಲಿಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಲು ನಾಳೆ ಕೊನೆಯ ದಿನವಾಗಿದೆ. ಈಗಾಗಲೇ ಶೇ. ೯೦ ರಷ್ಟು ಮಂದಿ ಆಧಾರ್ ಸಂಖ್ಯೆ ನೀಡಿದ್ದಾರೆ. ಉಳಿದ ಶೇ. ೧೦ ಮಂದಿಗೆ ಪಡಿತರ ನಿಲ್ಲಿಸುವುದಿಲ್ಲ. ಆದರೆ ಅವರಿಗೆ ಆಧಾರ್ ಸಂಖ್ಯೆ ಇಲ್ಲದಿದ್ದರೆ ಅವನ್ನು ಕೊಡಿಸುವ ಪ್ರಯತ್ನ ನಡೆಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆ ಆಯುಕ್ತ ಹರ್ಷಗುಪ್ತ ಉಪಸ್ಥಿತರಿದ್ದರು.
Comments are closed.