
ಬೆಂಗಳೂರು, ಜೂ.೨೯: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಸದಸ್ಯರು ನಗರದ ಪುರಭವನದ ಎದುರು ತರಕಾರಿ ಪದಾರ್ಥ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಅಗತ್ಯ ವಸ್ತುಗಳಾದ ತರಕಾರಿ, ಬೇಳೆ, ಪೆಟ್ರೋಲ್, ಔಷಧಿ ಮತ್ತಿತರ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೇಂದ್ರ ಸರ್ಕಾರ ಅವುಗಳ ಬೆಲೆ ಇಳಿಕೆಗೆ ಯಾವುದೇ ಕ್ರಮಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದೆ. ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ೭೦೦ ದಿನಗಳಾದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಬೆಲೆ ಇನ್ನುಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ದೂರಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾಗಿದೆ. ಆದರೆ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇವೆ. ಬೆಲೆ ಇಳಿಕೆಯ ಲಾಭ ಜನಸಾಮಾನ್ಯರಿಗೆ ದೊರಕುತ್ತಿಲ್ಲ. ಇದಕ್ಕೆ ಕೇಂದ್ರದ ಎನ್ಡಿಎ ಸರ್ಕಾರದ ಜನವಿರೋಧಿ ನೀತಿಯೇ ಕಾರಣ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ಬೆಲೆ ಏರಿಕೆ ಬಗ್ಗೆ ದೇಶದ ಜನರು ವಾಸ್ತವವಾಗಿ ನೋಡಬೇಕು ಎಂದು ಹೇಳಿದ್ದಾರೆ. ಆದರೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ಅವರು ಕಣ್ಣಿಗೆ ಹಳದಿ ಕನ್ನಡಕ ಹಾಕಿ ನೋಡುತ್ತಿದ್ದರು. ಈಗ ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುಷ್ಮಾ, ನಯನಾ, ಶೋಭಾ, ಭಾರತಿ ಶಂಕರ್, ಜಯಂತಿ, ಗಿರಿಜಾ ಮತ್ತಿತರರು ಭಾಗವಹಿಸಿದ್ದರು.
Comments are closed.