ಬೆಂಗಳೂರು: ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಡಿ (ಎಸ್ಎಎಸ್) ತಪ್ಪು ಮಾಹಿತಿ ನೀಡುವ ಮೂಲಕ ವಂಚಿಸಿದ್ದ ತೆರಿಗೆಯ ವ್ಯತ್ಯಾಸ ಮೊತ್ತದ ಪೈಕಿ 54.26 ಕೋಟಿ ಹಣವನ್ನು ಮಾನ್ಯತಾ ಟೆಕ್ ಪಾರ್ಕ್ ಕಂಪನಿ ಹೈಕೋರ್ಟ್ ಸಮ್ಮುಖದಲ್ಲಿ ಸೋಮವಾರ ಬಿಬಿಎಂಪಿಗೆ ಪಾವತಿಸಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಡಿ ತಮ್ಮ ಟೆಕ್ಪಾರ್ಕ್, ತಮ್ಮ ಕಟ್ಟಡ ಹವಾನಿಯಂತ್ರಿತ ವ್ಯವಸ್ಥೆಯಿಲ್ಲದ ವಸತಿಯೇತರ ಕಟ್ಟಡ ವ್ಯಾಪ್ತಿಗೆ
ಬರುತ್ತದೆ ಎಂದು ಘೋಷಿಸಿಕೊಂಡು, 2008-09ರಿಂದ 2015-16 ರವರೆಗೆ ಪ್ರತಿ ಚದರಡಿಗೆ 8 ರೂ. ಗಳಂತೆ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸಿತ್ತು. ಆದರೆ, ಪ್ರತಿ ಚದರಡಿಗೆ 8 ರೂ.ಗಳಂತೆ ಪಾವತಿಸುತ್ತಿದ್ದರ ಬದಲಿಗೆ ಚದರಡಿಗೆ 10 ರೂ. ಗಳಂತೆ ಈವರೆಗೂ ಪಾವತಿಸಬೇಕಾಗಿದ್ದ 83 ಕೋಟಿ ರೂ. ವ್ಯತ್ಯಾಸ ಮೊತ್ತ ಹಾಗೂ ಬಡ್ಡಿ ಸೇರಿ ಒಟ್ಟು 273 ಕೋಟಿ ರೂ. ಪಾವತಿಸುವಂತೆ ಟೆಕ್ಪಾರ್ಕ್ಗೆ ಹೈಕೋರ್ಟ್ ಏಕ ಸದಸ್ಯ ಪೀಠ
ಸೂಚಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು
ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠದ ಸಮ್ಮುಖದಲ್ಲಿ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯು ಬಿಬಿಎಂಪಿಗೆ 54,26,17,856 ರೂ.
ಮೊತ್ತದ ಎರಡು ಡಿಡಿಯನ್ನು ನೀಡಿತು.
ತದನಂತರ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಾನ್ಯತಾ ಟೆಕ್ ಪಾರ್ಕ್ ಸಲ್ಲಿಸಿರುವ ಮೇಲ್ಮನವಿ ಕುರಿತು ಉತ್ತರಿಸಲು ಸೂಚಿಸಿ ನಗರಾಭಿವೃದ್ಧಿ
ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಪ್ರಕರಣದಲ್ಲಿ ಮೇಲ್ಮನವಿದಾರರ ವಿರುದ್ಧ ಯಾವದೇ ರೀತಿ ಕ್ರಮ ಜರುಗಿಸದಂತೆ ಬಿಬಿಎಂಪಿಗೆ ಇದೇ ವೇಳೆ ಸೂಚಿಸಿದ ಪೀಠ ವಿಚಾರಣೆ ಮುಂದೂಡಿತು.
ಹವಾನಿಯಂತ್ರಿತ (ಸೆಂಟ್ರಲೈಸ್ಡ್ ಏರ್ ಕಂಡಿಷನ್) ವಸತಿಯೇತರ ಕಟ್ಟಡಗಳಿಂದ ಪ್ರತಿ ಚದರಡಿಗೆ 10 ರೂ. ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಹೀಗಾಗಿ 83,45,16,845 ವ್ಯತ್ಯಾಸದ ಮೊತ್ತ ಪಾವತಿಸುವಂತೆ ಮಾನ್ಯತಾ ಟೆಕ್ಪಾರ್ಕ್ಗೆ 2014ರಲ್ಲಿ ಬಿಬಿಎಂಪಿ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿತ್ತು. ಮಾನ್ಯತಾ ಪ್ರಮೋಟರ್ì ಪ್ರೈ ಲಿ ಕಂಪನಿ ಈ ಡಿಮ್ಯಾಂಡ್ ನೋಟಿಸ್ ಅನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಏಕಸದಸ್ಯ ಪೀಠವು ಬಿಬಿಎಂಪಿ
ಕ್ರಮವನ್ನು ಮಾನ್ಯ ಮಾಡಿತು. ಆದೇಶವನ್ನು ಟೆಕ್ ಪಾರ್ಕ್ ವಿಭಾಗೀಯ ಮೇಲ್ಮನವಿ ಸಲ್ಲಿಸಿತ್ತು.
ಸೋಮವಾರ ಈ ಮೇಲ್ಮನವಿ ವಿಚಾರಣೆ ವೇಳೆ ಏಕಸದಸ್ಯ ಪೀಠ ಸೂಚಿಸಿದ ಹಣವನ್ನು ಒಂದೇ ಬಾರಿ ಪಾವತಿಸಲು ಕಷ್ಟಸಾಧ್ಯವಾಗಿದ್ದು, ಆ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಆದರೆ, ಬಾಕಿ ಪಾವತಿಸಬೇಕಿರುವ ಹಣದ ಪೈಕಿ ಸದ್ಯ 54,26,17,856 ರೂ. ಪಾವತಿಸಲಾಗುವುದು ಹಾಗೂ 2016-17ನೇ ಸಾಲಿಗೆ ಬಿಬಿಎಂಪಿ ನಿಗದಿಪಡಿಸಿದ ತೆರಿಗೆಯನ್ನು ಪಾವತಿಸಲಾಗುವುದು ಎಂದು ಟೆಕ್ ಪಾರ್ಕ್ ಪರ ವಕೀಲರು ತಿಳಿಸಿದರು.
ಇದಕ್ಕೆ ಬಿಬಿಎಂಪಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿ, 273 ಕೋಟಿ ರೂ. ಪಾವತಿಸುವ ಬದಲು ಕೇವಲ 54.26 ಕೋಟಿ ರೂ. ನೀಡಲು ಮುಂದೆ ಬಂದಿರುವುದು ಸರಿಯಾದ ಕ್ರಮವಲ್ಲ ಎಂದರು. ನಂತರ ಕೋರ್ಟ್ ಸೂಚನೆ ಮೇರೆಗೆ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯಿಂದ 54,26,17,856 ರೂ. ಮೊತ್ತದ ಎರಡು ಡಿಡಿಯನ್ನು ಬಿಬಿಎಂಪಿ ಸ್ವೀಕರಿಸಿತು.
-ಉದಯವಾಣಿ
Comments are closed.