ರಾಷ್ಟ್ರೀಯ

ಪಾಕ್ ಮೇಲೆ ವೈಮಾನಿಕ ದಾಳಿ ನಡೆಸಿ; ಅಸೆಂಬ್ಲಿಯಲ್ಲಿ ಬಿಜೆಪಿ ಬೇಡಿಕೆ

Pinterest LinkedIn Tumblr

Jammu_and_Kashmir_Assembly3ಶ್ರೀನಗರ್: ಪಾಕಿಸ್ತಾನ ಮೂಲದ ಉಗ್ರರ ತಾಣದ ಮೇಲೆ ವೈಮಾನಿಕ ದಾಳಿ ನಡೆಸಿ ಬುದ್ಧಿ ಕಲಿಸಿ…ಇದು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಸರ್ಕಾರದ ವಿರುದ್ಧ ಮಿತ್ರಪಕ್ಷವಾದ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಪರಿ.

ಜಮ್ಮು ಕಾಶ್ಮೀರದ ಪ್ಯಾಂಪೋರ್ ನಲ್ಲಿ ಕಳೆದ ಶನಿವಾರ ಉಗ್ರರು ನಡೆಸಿದ ದಾಳಿಯಲ್ಲಿ 8 ಮಂದಿ ಯೋಧರು ಹುತಾತ್ಮರಾಗಿದ್ದರು. ಆ ಹಿನ್ನೆಲೆಯಲ್ಲಿ ಮಂಗಳವಾರ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಮುಫ್ತಿ ಸರ್ಕಾರವನ್ನು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ನಾವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಅಲ್ಲಿನ ಉಗ್ರರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಇನ್ಮುಂದೆ ಯಾವತ್ತೂ ನಮ್ಮ ಮೇಲೆ ದಾಳಿ ನಡೆಸದಂತೆ ಪಾಠ ಕಲಿಸಬೇಕು ಎಂದು ಬಿಜೆಪಿ ಸದಸ್ಯ ರವೀಂದರ್ ರೈನಾ ಅಸೆಂಬ್ಲಿಯಲ್ಲಿ ಕೂಗಾಡಿದ್ದು, ಇದಕ್ಕೆ ಪಕ್ಷದ ಇತರ ಸದಸ್ಯರು ಧ್ವನಿಗೂಡಿಸಿ ಪಾಕ್ ವಿರೋಧಿ ಘೋಷಣೆ ಕೂಗಿದರು.

ಪಾಕಿಸ್ತಾನ ಮೇಲೆ ಯುದ್ಧ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ವಿರೋಧಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಆಡಳಿತಾರೂಢ ಪಿಪಿಪಿ(ಪೀಪಲ್ಸ್ ಡೆಮೋಕ್ರಟಿಕ್ ಪಾರ್ಟಿ)ಗೆ ಸವಾಲು ಹಾಕಿತು. ಪಕ್ಷದ ದಾವಿಂದರ್ ರಾಣಾ ಮಾತನಾಡಿ, ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಬೇಕೆಂಬುದು ಬಿಜಪಿ ಬೇಡಿಕೆ. ಬಾಂಬ್ ಹಾಕಿ ಅವರಿಗೂ ಭಯ ಹುಟ್ಟಿಸಬೇಕೆಂಬುದು ಬಿಜೆಪಿ ಇಚ್ಛೆಯಾಗಿದೆ. ಹಾಗಾಗಿ ಪಾಕ್ ಜೊತೆ ಶಾಂತಿಯೋ ಅಥವಾ ಯುದ್ಧವೋ ಎಂಬುದನ್ನು ಜಮ್ಮು ಕಾಶ್ಮೀರ ಸರ್ಕಾರ ಹೇಳಿಕೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಆಗ ಬಿಜೆಪಿ ಸದಸ್ಯರು ವಿರೋಧ ಪಕ್ಷದ ಶಾಸಕರು ಕೂಡಾ ಪಾಕಿಸ್ತಾನಕ್ಕೆ ತೆರಳಲಿ ಎಂದು ಅವರ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
-ಉದಯವಾಣಿ

Comments are closed.