ಬೆಂಗಳೂರು, ಜೂ. ೨೬ – ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಕಾಂಗ್ರೆಸ್ ಪಕ್ಷ ಈಗಲೂ ಅದರ ಪರಿಣಾಮಗಳನ್ನು ಅನುಭವಿಸುತ್ತಿದೆ. ತುರ್ತು ಪರಿಸ್ಥಿತಿಯ ಕರಾಳ ಛಾಯೆ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಹೇಳಿದರು.
ತುರ್ತು ಪರಿಸ್ಥಿತಿಯ ದುರ್ದಿನಗಳು ದೇಶದಲ್ಲಿ ಎಂದೂ ಮತ್ತೆ ಬರಬಾರದು ಎಂದು ಹೇಳುವ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಅವರು ಬಿಚ್ಚಿಟ್ಟರು.
ನಗರ ಬಿಜೆಪಿ ಆರ್ಎಸ್ಎಸ್ ಕಚೇರಿ ಕೇಶವಶಿಲ್ಪದಲ್ಲಿ ಇಂದು ಆಯೋಜಿಸಿದ್ದ ತುರ್ತು ಪರಿಸ್ಥಿತಿ ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಜಾತಂತ್ರವನ್ನು ಧಮನ ಮಾಡಲು ಕಾಂಗ್ರೆಸ್ ಪಕ್ಷ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿತ್ತು. ಆನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ನಾಮಾವಶೇಷವಾಯಿತು. ಅದೇ ಪರಿಸ್ಥಿತಿ ಈಗಲೂ ಮುಂದುವರೆದಿದೆ. ತುರ್ತು ಪರಿಸ್ಥಿತಿಯ ಪರಿಣಾಮಗಳು ಕಾಂಗ್ರೆಸ್ನ ಮೇಲೆ ಇದ್ದೇ ಇರುತ್ತದೆ. ಇದು ಆ ಪಕ್ಷದ ಹಣೆಬರಹ ಎಂದು ವ್ಯಂಗ್ಯವಾಡಿದರು.
ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಅಧಿಕಾರಕ್ಕಾಗಿ ಜನತಂತ್ರವನ್ನೇ ಬುಡಮೇಲು ಮಾಡುವ ತುರ್ತು ಪರಿಸ್ಥಿತಿಯನ್ನು ಹೇರಿದ್ದರೂ ಅಧಿಕಾರಕ್ಕಾಗಿ ಸಂವಿಧಾನ, ನ್ಯಾಯಾಂಗ, ಪತ್ರಿಕಾ ಸ್ವಾತಂತ್ರ್ಯ ಯಾವುದನ್ನೂ ಲೆಕ್ಕಿಸದಂತಹ ಮನಸ್ಥಿತಿ ಅವರದ್ದಾಗಿತ್ತು ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿಯ ಕರಾಳ ನೆನಪು ಕಾರ್ಯಕ್ರಮದಲ್ಲಿ ಮೆಲುಕು ಹಾಕಿದ್ದ ಜೋಷಿ ಅವರು, ತುರ್ತು ಪರಿಸ್ಥಿತಿಯ ಸಂಘರ್ಷ, ಜೈಲುವಾಸ ಎಲ್ಲವನ್ನೂ ಮನಮುಟ್ಟುವಂತೆ ಹೇಳಿದರು.
ತಮ್ಮ ಆಯ್ಕೆಯನ್ನು ಹೈಕೋರ್ಟ್ ರದ್ದು ಮಾಡಿದ್ದಕ್ಕೆ ಇಂದಿರಾಗಾಂಧಿ ಅವರು, ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಿದರೂ ಎಲ್ಲಾ ನಾಯಕರೂ ಬಂಧಿತರಾದರೂ ಜೈಲಿನಲ್ಲಿದ್ದವರಿಗಿಂತ ಹೊರಗಡೆ ಇದ್ದು ಸಂಘರ್ಷ ಮಾಡಿದ್ದವರದ್ದೇ ಮಹತ್ವದ ಪಾತ್ರ. ಸಾಮಾನ್ಯ ಜನ ತುರ್ತು ಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡಿದ್ದು, ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದು ಜೋಷಿ ಹೇಳಿದರು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ನಡೆಯುತ್ತಿದ್ದ ಹೋರಾಟ ಸತ್ಯಾಗ್ರಹದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದೆ. ಆಗಿನ ಜನಸಂಘ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ಸಿಪಿಎಂನ ಯಾವುದೇ ಒಬ್ಬ ಕಾರ್ಯಕರ್ತ ಈ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರು ಹೇಳಿದರು.
ಉತ್ತರ ಭಾರತದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ತೀವ್ರವಾಗಿದ್ದು, ದಕ್ಷಿಣ ಭಾರತದಲ್ಲಿ ಹೋರಾಟ ಇತ್ತಾದರೂ ಅದು ಅಷ್ಟು ತೀವ್ರವಾಗಿರಲಿಲ್ಲ. ತುರ್ತು ಪರಿಸ್ಥಿತಿಯ ಆ ದುರ್ದಿನಗಳು ಎಂದೂ ಬರಬಾರದು ಎಂದರು.
ದೇಶದಲ್ಲಿ ಭ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ಕರೆ ನೀಡಿ ಇಂದಿರಾಗಾಂಧಿ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣರಾದ ಲೋಕನಾಯಕ ಜಯಪ್ರಕಾಶ್ ನಾರಾಯಣ್ರವರನ್ನು ಆಗಿನ ಪ್ರಧಾನಿ ಇಂದಿರಾಗಾಂಧಿ ಕೆಟ್ಟದಾಗಿ ನಡೆಸಿಕೊಂಡರು, ನಾಯಕರಿಗೆ ಜೈಲಿನಲ್ಲಿ ಸಾಕಷ್ಟು ಕಿರುಕುಳ, ಹಿಂಸೆಯನ್ನು ನೀಡಲಾಗಿತ್ತು ಎಂದು ತುರ್ತು ಪರಿಸ್ಥಿತಿಯ ಹಲವು ಘಟನಾವಳಿಗಳನ್ನು ಮೆಲುಕು ಹಾಕಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದರೂ ಹೋರಾಟ ನಡೆಸಿ ಜೈಲುವಾಸ ಅನುಭವಿಸಿ, ಕೈಕೊಳ ಹಾಕಿಸಿಕೊಂಡೇ ಮಗುವಿಗೆ ಜನ್ಮ ನೀಡಿದ ಆರ್ಎಸ್ಎಸ್ನ ಕಾರ್ಯಕರ್ತೆ ಗಾಯತ್ರಿ ಸೇರಿದಂತೆ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ ಹಲವು ಕಾರ್ಯಕರ್ತರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಬರಹಗಾರ ಬಾಬು ಕೃಷ್ಣಮೂರ್ತಿ, ಸಂಸದ ಪಿ.ಸಿ. ಮೋಹನ್, ಶಾಸಕರುಗಳಾದ ಸುರೇಶ್ ಕುಮಾರ್, ಸಿ.ಟಿ. ರವಿ, ನಗರ ಬಿಜೆಪಿ ಕಾರ್ಯದರ್ಶಿ ಜಯದೇವ್, ನಗರ ಬಿಜೆಪಿ ಅಧ್ಯಕ್ಷ ಸದಾಶಿವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Comments are closed.