ಬೆಂಗಳೂರು: ಕಾಂಗ್ರೆಸ್ ಉಳಿವಿಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೈಬಿಡಲೇಬೇಕು. ಹಾಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಲೇಬೇಕಾಗಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪಟ್ಟುಹಿಡಿದಿದ್ದಾರೆ. ಏತನ್ಮಧ್ಯೆ ಬಂಡಾಯ ಶಾಸಕರ ನಡೆ ಬಿರುಸಿಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತಮ್ಮ ನಿವಾಸದಲ್ಲಿ ಸಚಿವ ಡಿಕೆ ಶಿವಕುಮಾರ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರು ಹೈಕಮಾಂಡ್ ಮೊರೆ ಹೋಗಿದ್ದು, ಆ ಹಿನ್ನೆಲೆಯಲ್ಲಿ ನಾಳೆ ರಾಜ್ಯಕ್ಕೆ ದಿಗ್ವಿಜಯ್ ಸಿಂಗ್ ಆಗಮಿಸಲಿದ್ದಾರೆ.
5 ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಅಂತ ಹೇಳಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗೆ ಇದು ಮಹತ್ವದ ಕಾಲ. ಸಿದ್ದರಾಮಯ್ಯ ಪೂರ್ಣವಾಧಿ ಪೂರೈಸುತ್ತಾರೆಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕೆ ಯಾವುದೇ ಕೊರತೆ ಇಲ್ಲ. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅರ್ಹ ನಾಯಕರಿದ್ದಾರೆ ಎಂದು ಅತೃಪ್ತ ಶಾಸಕರ ಜೊತೆ ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನಾಗಲಿ, ಅಂಬರೀಶ್ ಅಗಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಲ್ಲ. ಕಾಂಗ್ರೆಸ್ ಉಳಿವಿಗಾಗಿ ನಾಯಕತ್ವ ಬದಲಾವಣೆ ಅಗತ್ಯ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಶ್ರೀನಿವಾಸ್ ಪ್ರಸಾದ್ ಹೇಳಿದರು.
ನಾಳೆ ಸಂಜೆ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ
ರಾಜ್ಯ ರಾಜಕಾರಣದಲ್ಲಿನ ಬಂಡಾಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.
-ಉದಯವಾಣಿ
Comments are closed.