ಕರ್ನಾಟಕ

ಆಕ್ಷೇಪಕಾರಿ ಪೋಸ್ಟ್‌ ಡಿಲೀಟ್ ಮಾಡಿದ ನಾಗೇಂದ್ರಾಚಾರ್ಯ

Pinterest LinkedIn Tumblr

vishnudasa1ಬೆಂಗಳೂರು: ಶ್ರೀಮದುತ್ತರಾದಿಮಠದ ಪೀಠಾಧ್ಯಕ್ಷರಾದ ಸತ್ಯಾತ್ಮತೀರ್ಥ ಸ್ವಾಮೀಜಿ ಶಿಷ್ಯನ ಬಾಯಿಗೆ ಸೀಕರಣೆ ಹಾಕಿದ ಫೋಟೊ ಮತ್ತು ಲೇಖನವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಮಾಧ್ವಶಾಸ್ತ್ರದ ವಿದ್ವಾಂಸರಾದ ವಿಷ್ಣುದಾಸ ನಾಗೇಂದ್ರಾಚಾರ್ಯ ಸೋಮವಾರ ಮುಂಜಾನೆ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ, ಮಾಧ್ವ ಸಮಾಜದ ಕ್ಷಮೆ ಯಾಚಿಸಿದ್ದಾರೆ.
‘ನಾನು ಮಾಡಿರುವದು ಮಹತ್ತರ ಅಪರಾಧ. ಪ್ರಾಯಶ್ಚಿತ್ತವಾಗಲೇ ಬೇಕು’ ಎಂದು ಘೋಷಿಸಿಕೊಂಡಿರುವ ನಾಗೇಂದ್ರಾಚಾರ್ಯ, ‘ಇದರಿಂದ ಸಮಾಜದ ಎಲ್ಲ ಸಜ್ಜನರ ಮನಸ್ಸಿಗೆ ಹಿಂಸೆಯಾಗಿದೆ. ಅದಕ್ಕೆ ಕಾರಣ ನಾನೇ ಆಗಿದ್ದೇನೆ. ಅಸಂಖ್ಯ ಸಜ್ಜನರ ಮನಸ್ಸಿಗೆ ಹಿಂಸೆಯನ್ನು ನೀಡುವದು ಮಹಾಪಾಪ. ಆ ಪಾಪವನ್ನು ನಾನು ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
‘ಸೌಟಿನಿಂದ ಬಾಯಿಗೆ ಬಡಿಸುವ ಪದ್ಧತಿ, ಒಂದೇ ತಟ್ಟೆಯಲ್ಲಿ ಉಣ್ಣುವ ಪದ್ಧತಿ ಇವು ಮೊದಲಿನಿಂದಲೂ ನನ್ನಲ್ಲಿ ಅಸಹ್ಯವನ್ನುಂಟುಮಾಡಿದ್ದ ಅನಾಚಾರಗಳು. ಇದನ್ನು ಯಾರೇ ಮಾಡಿದರೂ ನನಗೆ ಸಹನೆಯಾಗುತ್ತಿರಲಿಲ್ಲ. ವೈಯಕ್ತಿಕವಾಗಿ ಹತ್ತಾರು ಬಾರಿ ಹೇಳಿದ್ದರೂ ಯಾವ ಪರಿಣಾಮವಾಗಿರಲಿಲ್ಲ, ಸಾಮಾಜಿಕ ಮಾಧ್ಯಮದಿಂದ ಆ ಬದಲಾವಣೆಯನ್ನು ತರಲು ಸಾಧ್ಯ ಎಂಬ ಏಕೈಕ ಸದುದ್ದೇಶದಿಂದ ನಾನು ಅದನ್ನು ಪ್ರಕಟಿಸಿದ್ದೇನೆ’ ಎಂದು ತಮ್ಮ ಪೋಸ್ಟ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ಷಮಾಪಣೆಯ ಪೋಸ್ಟ್‌ನ ಕೊನೆಯಲ್ಲಿ ‘ದಯವಿಟ್ಟು ಬಡಿಸುವ ಪಾತ್ರೆಯಲ್ಲಿ ತಿನ್ನುವ/ತಿನ್ನಿಸುವ, ಒಂದೇ ಪಾತ್ರೆಯಲ್ಲಿ ಉಣ್ಣುವ ಅನಾಚಾರವನ್ನು ಮಠ-ವಿದ್ಯಾಪೀಠಗಳಲ್ಲಿ ನಿಲ್ಲಿಸಿ’ ಎಂಬ ವಿನಂತಿಯನ್ನೂ ಸೇರಿಸಿದ್ದಾರೆ.

ಭಕ್ತರಿಂದ ಆಕ್ಷೇಪ: ನಾಗೇಂದ್ರಾಚಾರ್ಯರು ತಮ್ಮ ‘ಕ್ಷಮಾಪಣೆ’ಯ ಪೋಸ್ಟ್‌ನಲ್ಲಿ ಬರೆದಿರುವ ‘ಪ್ರಜಾವಾಣಿಯ ಲೇಖನ ಬ್ರಾಹ್ಮಣ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಈ ಪಾಪಕ್ಕೆ ಅವಶ್ಯವಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇಬೇಕು’ ಎಂಬ ಸಾಲುಗಳಿಗೆ ಶ್ರೀಮದುತ್ತರಾದಿಮಠದ ಭಕ್ತರಿಂದಲೇ ಆಕ್ಷೇಪ ವ್ಯಕ್ತವಾಗಿದೆ.
‘ನಾಗೇಂದ್ರಾಚಾರ್ಯರ ಫೇಸ್‌ಬುಕ್‌ ಪೋಸ್ಟ್‌ ಹಾಗೂ ಪ್ರಜಾವಾಣಿ ವರದಿ ಎರಡನ್ನೂ ಓದಿದೆ. ವರದಿಯ ಮೂಲವೇ ಆಚಾರ್ಯರು. ಆದ್ದರಿಂದ ಸಮಾಜಕ್ಕೆ ಉತ್ತರಿಸಬೇಕಾದವರು ಅವರೇ. ಫೇಸ್‌ಬುಕ್‌ ಮೂಲಕ ನಾಗೇಂದ್ರಾಚಾರ್ಯರು ಯಾವ ಚರ್ಚೆಯನ್ನು ಆರಂಭಿಸಿದರೋ ಅದರ ತಾರ್ಕಿಕ ಅಂತ್ಯ ಅವರೇ ಮಾಡಬೇಕಿತ್ತು. ಆಡಿದ ಮಾತೇ ತಪ್ಪು ಎಂದು ಒಪ್ಪುವುದು ಹೌದಾದರೆ, ವರದಿ ಮಾಡಿದ ಪತ್ರಿಕೆಯನ್ನು ನಿಂದಿಸುವುದು ತೃಣ ಮಾತ್ರವೂ ಸರಿಯಲ್ಲ’ ಎಂದು ಮಠದ ಭಕ್ತರಾದ ವಾದಿರಾಜಾಚಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಪತ್ರಿಕೆ ಇಡೀ ಸಮಾಜದ ಕನ್ನಡಿ. ನಮಗೆ ಬೇಕಾದ್ದು ಬಂದಾಗ ಪತ್ರಿಕೆಗಳನ್ನು ಕೊಂಡಾಡುವುದು, ಬೇಡವಾದ್ದು ಬಂದಾಗ ಅವಮಾನವಾಯಿತು ಎಂದು ನಿಂದಿಸುವುದು ತಪ್ಪು’ ಎಂದು ಮತ್ತೋರ್ವ ಭಕ್ತರಾದ ಗೋಪಾಲಕೃಷ್ಣ ಹೇಳಿದರು.
ಅಕೌಂಟ್‌ ನಾಪತ್ತೆ
ರಾತ್ರಿ 7 ಗಂಟೆ ವೇಳೆಗೆ ನಾಗೇಂದ್ರಾಚಾರ್ಯ ಅವರು ತಮ್ಮ ಫೇಸ್‌ಬುಕ್‌ನ ಪ್ರೊಫೈಲ್‌ ಚಿತ್ರ ಬದಲಿಸಿಕೊಂಡರು. ನಂತರ ಅವರ ಅಕೌಂಟ್‌ ಸಾರ್ವಜನಿಕರ ಕಣ್ಣಿಗೆ ಬೀಳಲಿಲ್ಲ. ಫೇಸ್‌ಬುಕ್‌ನಲ್ಲಿ ಅವರ ಹೆಸರು ಟೈಪಿಸಿದರೆ ‘ಕಂಟೆಂಟ್ ನಾಟ್ ಅವೈಲಬಲ್’ ಒಕ್ಕಣೆ ಕಂಪ್ಯೂಟರ್ ತೆರೆಯ ಮೇಲೆ ಮೂಡುತ್ತಿತ್ತು.

Comments are closed.