ಕರ್ನಾಟಕ

ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನ; ಶಾಸಕ ಸ್ಥಾನಕ್ಕೆ ಅಂಬರೀಷ್‌ ರಾಜೀನಾಮೆ

Pinterest LinkedIn Tumblr

ambarish

ಬೆಂಗಳೂರು: ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಮಾಜಿ ವಸತಿ ಸಚಿವ, ನಟ ಅಂಬರೀಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆ ವೇಳೆ ಅಂಬರೀಶ್ ಸೇರಿದಂತೆ 14 ಸಚಿವರನ್ನು ಸಂಪುಟದಿಂದ ಕೈಬಿಟ್ಟು, 13 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರು ತಮ್ಮ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂಲಕ ಸ್ಪೀಕರ್ ಇಲ್ಲದ ಕಾರಣ ವಿಧಾನಸಭಾ ಕಾರ್ಯದರ್ಶಿಗೆ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ.

ರಾಜಿನಾಮೆ ಪತ್ರದಲ್ಲಿ ಅಂಬರೀಶ್ ಮಂಡ್ಯ ಜಿಲ್ಲೆ ಶಾಸಕನಾಗಿರುವ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂಬ ಒಂದೇ ಸಾಲನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಂಬರೀಷ್ ಅವರ ರಾಜಿನಾಮೆ ಪತ್ರವನ್ನು ನಿರಾಕರಿಸಿರುವ ಡೆಪ್ಯೂಟಿ ಸ್ಪೀಕರ್ ಶಿವಶಂಕರ್ ರೆಡ್ಡಿ ಅವರು ಅಂಬರೀಶ್ ಅವರಿಗೆ ಖುದ್ದಾಗಿ ಬಂದು ರಾಜಿನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ದೆಹಲಿಯಲ್ಲಿ ಹರಿಪ್ರಸಾದ್ ಅಂಬಿ ಪರ ಬ್ಯಾಟಿಂಗ್

ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸೋಮವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಅಂಬರೀಷ್ ಅವರಂಥ ಹಿರಿಯ ನಾಯಕರನ್ನು ಸಂಪುಟದಿಂದ ಕೈಬಿಡುವುದು ಅಷ್ಟು ಸಮಂಜಸವಾದುದಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಕಟ್ಟಾ ಅಭಿಮಾನಿಯಿಂದ ಆತ್ಮಹತ್ಯೆ ಯತ್ನ

ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿರುವ ಅಂಬರೀಷ್ ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮದ್ದೂರಿನಲ್ಲಿ ನಡೆದಿದೆ. ಮದ್ದರೂರು ತಾಲೂಕಿನ ಕರಡಕೆರೆ ಗ್ರಾಮದ ನಿವಾಸಿ ಪುಟ್ಟಸ್ವಾಮಿ ಎಂಬಾತ ವಿಷ ಸೇವಿಸಿದ್ದು, ಇದನ್ನು ಗಮನಿಸಿದ ಉಳಿದವರು ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿತ್ರೋದ್ಯಮ ಬಂದ್

ಅಂಬರೀಷ್ ಅವರನ್ನು ಸಂಪುಟದಿಂದ ಯಾವುದೇ ಕಾರಣಕ್ಕೂ ಕೈಬಿಡಬಾರದೆಂದು ಆಗ್ರಹಿಸಿರುವ ಚಿತ್ರೋದ್ಯಮ ಸೋಮವಾರ ತನ್ನೆಲ್ಲಾ ಕಾರ್ಯಗಳನ್ನೂ ಸಂಪೂರ್ಣ ಸ್ಥಗಿತಗೊಳಿಸಿದೆ. ಚಿತ್ರೀಕರಣಕ್ಕೆ ತೆರಳಬೇಕಾದ ‘ಸಂತು ಸ್ಟ್ರೇಟ್ ಫಾರ್ವರ್ಡ್, ಸ್ಮೈಲ್ ಪ್ಲೀಸ್, ಕಿರಿಕ್ ಪಾರ್ಟಿ, ಮಂಗಳೂರು ಅಂಡರ್ ವರ್ಲ್ಡ್ ಸೇರಿದಂತೆ ಇನ್ನೂ ಕೆಲ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ಅಂಬಿಗೆ ಬೆಂಬಲ ನೀಡಿದ್ದಾರೆ.

Comments are closed.