
ರಾಜ್‌ಕೋಟ್: ಗುಜರಾತ್‌ನ ಖ್ಯಾತ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಮತ್ತು ಆತನ ಪತ್ನಿ ಗುಜರಾತ್‌ನ ಗೀರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಿಂಹಗಳ ಮುಂದೆ ತೆಗೆಸಿಕೊಂಡಿರುವ ಫೋಟೊ ವಿವಾದವನ್ನು ಸೃಷ್ಟಿಸಿದೆ.
ರವೀಂದ್ರ ಜಡೇಜಾ ಸಿಂಹಗಳ ಮುಂದೆ ತೆಗೆಸಿಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಗುಜರಾತ್ ಅರಣ್ಯ ಇಲಾಖೆ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.

ಮೂಲತಃ ಜಾಮ್ ನಗರದ ರವೀಂದ್ರ ಜಡೇಜಾ ನಿನ್ನೆ ಗೀರ್ ರಾಷ್ಟ್ರೀಯ ಅಭಯಾರಣ್ಯಕ್ಕೆ ಪತ್ನಿಯೊಡನೆ ತೆರಳಿದ್ದರು. ಸಿಂಹಗಳನ್ನು ಕಾಣುತ್ತಿದ್ದಂತೆ ವಾಹನದಿಂದ ಪತ್ನಿಯೊಂದಿಗೆ ಕೆಳಗಿಳಿದ ಜಡೇಜಾ, ಸಿಂಹಗಳ ಮುಂದೆ ಸೆಲ್ಫಿ ಫೋಟೊ ತೆಗೆದುಕೊಂಡಿದ್ದರು. ಈ ಫೋಟೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತು.
ಗೀರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರವಾಸಿಗರು ವಾಹನದಿಂದ ಕೆಳಗಿಳಿಯುವಂತಿಲ್ಲ. ಅದನ್ನು ಉಲ್ಲಂಘಿಸಿ ಜಡೇಜಾ ಅವರು ವಾಹನದಿಂದ ಇಳಿದು ಸಿಂಹಗಳ ಮುಂದೆ ಫೋಟೊ ತೆಗೆಸಿಕೊಂಡಿರುವುದು ದೃಢಪಟ್ಟಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯಾಧಿಕಾರಿ ಅನಿರುದ್ಧ ಪ್ರತಾಪಸಿಂಗ್ ಆದೇಶ ಹೊರಡಿಸಿದ್ದಾರೆ.
Comments are closed.