ರಾಷ್ಟ್ರೀಯ

ಗುಲ್ಬರ್ಗ್ ಹತ್ಯಾಕಾಂಡ 14 ವರ್ಷಗಳ ಸತತ ವಿಚಾರಣೆ ಬಳಿಕ ಮಹತ್ವದ ತೀರ್ಪು : 11 ಅಪರಾಧಿಗಳಿಗೆ ಜೀವಾವಧಿ, 13 ಮಂದಿಗೆ 7 ವರ್ಷ ಜೈಲು ಶಿಕ್ಷೆ

Pinterest LinkedIn Tumblr

Gulberg massacre

ಅಹ್ಮದಾಬಾದ್,ಜೂ.17- ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸಹಿತವಾಗಿ 69 ಜನರ ಮಾರಣ ಹೋಮಕ್ಕೆ ಕಾರಣವಾದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನ್ಯಾಯಾಲಯ ಇಂದು 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 13 ಮಂದಿಗೆ ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕಳೆದ ಜೂನ್ 2ರಂದು ನ್ಯಾಯಾಲಯವು ಗುಲ್ಬರ್ಗ್ ಹತ್ಯಾಕಾಂಡಕ್ಕೆ ಸಂಬಂಧಿಸಿ 11 ಮಂದಿಯನ್ನು ಕೊಲೆ ಅಪರಾಧಿಗಳೆಂದು ಮತ್ತು ವಿಎಚ್‍ಪಿ ನಾಯಕ ಅತುಲ್ ವೈದ್ಯ ಸೇರಿದಂತೆ ಇತರ 13 ಮಂದಿಯನ್ನು ಕಡಿಮೆ ಪ್ರಮಾಣದ ಅಪರಾಧ ಕೃತ್ಯ ಎಸಗಿದವರೆಂದು ತೀರ್ಪು ನೀಡಿತ್ತಲ್ಲದೆ 36 ಮಂದಿಯನ್ನು ಖುಲಾಸೆಗೊಳಿಸಿತ್ತು.

2002ರಲ್ಲಿ ಮುಖ್ಯ ಆರೋಪಿಯಾಗಿ ಬಂಧಿತನಾಗಿ ಅನಂತರ ಕಳೆದ ಫೆಬ್ರವರಿಯಲ್ಲಿ ಜಾಮೀನು ಪಡೆದು ಬಿಡುಗಡೆ ಹೊಂದಿ ತಲೆಮರೆಸಿಕೊಂಡಿದ್ದ ಕೈಲಾಶ್ ಧೋಭಿ ಜೂ.13ರಂದು ನ್ಯಾಯಾಲಯಕ್ಕೆ ಶರಣಾಗಿದ್ದ. ಅನಂತರದಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ನಿರ್ಧರಿಸುವ ಬಗ್ಗೆ ವಿಚಾರಣೆ ಕೈಗೊಂಡಿತ್ತು. ಆ ಸಂದರ್ಭದಲ್ಲಿ ಕೈಲಾಶ್ ಧೋಬಿಯನ್ನು ಸಾಬರ್‍ಮತಿ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಶಿಕ್ಷೆಯ ಪ್ರಮಾಣ ನಿರ್ಧರಿಸುವ ಸಂಬಂಧ ನಡೆದ ಕಲಾಪದಲ್ಲಿ ಸುಪ್ರೀಂ ಕೋರ್ಟ್‍ನಿಂದ ನೇಮಕಗೊಂಡು ಎಸ್‍ಐಟಿಯನ್ನು ಪ್ರತಿನಿಧಿಸುತ್ತಿರುವ ಸರ್ಕಾರಿ ಅಭಿಯೋಜಕ ಆರ್.ಸಿ. ಕೋಡೇಕರ್ ಅವರು ಪ್ರಕರಣದ ಎಲ್ಲಾ 24 ಅಪರಾಧಿಗಳಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗಿಂತ ಕಡಿಮೆ ಪ್ರಮಾಣದ ಯಾವುದೇ ಶಿಕ್ಷೆಯನ್ನು ವಿಧಿಸಕೂಡದೆಂದು ವಾದಿಸಿದ್ದರು.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವು 2002ರ ಫೆಬ್ರವರಿ 28ರಂದು ನಡೆದಿತ್ತು. ಆಗ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಹ್ಮದಾಬಾದ್‍ನ ಹೃದಯ ಭಾಗದಲ್ಲಿರುವ ಗುಲ್ಬರ್ಗ್ ಸೊಸೈಟಿಯ ಮೇಲೆ ಸುಮಾರು 400 ರಷ್ಟು ಮಂದಿ ಉದ್ರಿಕ್ತ ಜನರು ನಡೆಸಿದ್ದ ಹಿಂಸಾತ್ಮಕ ದಾಳಿಯಲ್ಲಿ ಮಾಜಿ ಸಂಸದ ಜಾಫ್ರಿ ಸಹಿತ 69 ಮಂದಿ ಹತರಾಗಿದ್ದರು.

ಸುಪ್ರೀಂ ಕೋರ್ಟಿನಿಂದ ನೇಮಕಗೊಂಡಿದ್ದ ಎಸ್‍ಐಟಿಯಿಂದ ತನಿಖೆಯಾಗಿದ್ದ 2002ರ 9 ಗುಜರಾತ್ ದೊಂಬಿಗಳಲ್ಲಿ ಸೊಸೈಟಿ ದೊಂಬಿ ಕೂಡ ಒಂದಾಗಿದೆ.

Comments are closed.