ಅಂತರಾಷ್ಟ್ರೀಯ

ಬೊಜ್ಜು ನಿರ್ಲಕ್ಷಿಸಿದರೆ ಕ್ಯಾನ್ಸರ್‌

Pinterest LinkedIn Tumblr

bojjuಭಾರತದಲ್ಲಿ ನಲವತ್ತು ವರ್ಷ ದಾಟಿದವರಿಗೆ ಬೊಜ್ಜು ಸಾಮಾನ್ಯ ಎನ್ನುವಂತಾಗಿದ್ದು, ಅದನ್ನು ಹಾಗೆಯೇ ನಿರ್ಲಕ್ಷಿಸಿದರೆ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎನ್ನುವ ಆತಂಕವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಹಾಗೂ ವೈದ್ಯಕೀಯ ತಜ್ಞೆ ಡಾ. ಶೆರ್ಲಿ ಟೆಲಿಸ್ ಹೊರಹಾಕಿದ್ದಾರೆ.

ಪತಂಜಲಿ ಯೋಗ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಬೊಜ್ಜು ನಿವಾರಣಾ ಶಿಬಿರದ ಶಿಬಿರಾರ್ಥಿಗಳಿಗೆ ‘ಯೋಗದ ಮೂಲಕ ಬೊಜ್ಜು ನಿವಾರಣೆ’ ವಿಷಯದ ಕುರಿತು ಉಪನ್ಯಾಸ ನೀಡಲು ಹುಬ್ಬಳ್ಳಿಗೆ ಆಗಮಿಸಿದಾಗ ‘ವಿಶ್ವವಾಣಿ’ ನಡೆಸಿದ ಸಂದರ್ಶನದಲ್ಲಿ ಅವರು ಬೊಜ್ಜು ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶೆರ್ಲೆ ಹೇಳಿದ್ದಿಷ್ಟು: ‘ಬೊಜ್ಜು’ ಎನ್ನುವುದು ಸಣ್ಣ ಸಮಸ್ಯೆ ಎಂದುಕೊಂಡರೆ, ಮುಂದೊಂದು ದಿನ ಭಾರಿ ಬೆಲೆ ತೆತ್ತಬೇಕಾಗುತ್ತದೆ. ಇದು ಆಧುನಿಕ ಜೀವನ ಶೈಲಿಯ ಆಹಾರ ಪದ್ಧತಿ ಹಾಗೂ ಆಲಸ್ಯತನದ ಕೊಡುಗೆಯಾಗಿದೆ. ಬೊಜ್ಜಿನಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಉಸಿರಾಟ ತೊಂದರೆ, ಥೈರಾಯ್ಡ್ ಜತೆಗೆ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆಯೂ ಬರಬಹುದು. ದೈನಂದಿನ ಆಹಾರ ಪದ್ಧತಿ ಮತ್ತು ಅವ್ಯವಸ್ಥಿತ ದಿನಚರಿಯೇ ಇದಕ್ಕೆ ಮುಖ್ಯ ಕಾರಣ.ರಸ್ತೆ ಬದಿಯಲ್ಲಿ, ಹೋಟೆಲ್‌ಗಳಲ್ಲಿ, ಬೇಕರಿ ತಿಂಡಿ ತಿನಿಸು, ಕರಿದ ಪದಾರ್ಥ ತಿನ್ನುವುದರಿಂದ ಬೊಜ್ಜು ಬರುತ್ತವೆ. ಹೊತ್ತು ಗೊತ್ತಿಲ್ಲದೆ ಊಟ-ತಿಂಡಿ ಮಾಡುವುದು, ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುವುದು ಕೂಡಾ ಬೊಜ್ಜಿಗೆ ಕಾರಣವಾಗಿದೆ. ಕೆಲವರು ಬೊಜ್ಜು ಬಂದಿದೆ ಎಂದು ಊಟ-ತಿಂಡಿಯನ್ನೇ ಬಿಟ್ಟು ಬಿಡುತ್ತಾರೆ.

ಆದರೆ, ಇದು ದೈಹಿಕ ಆರೋಗ್ಯದಮೇಲೆ ಇನ್ನೂ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಕಾರಣ ಹಾಗೂ ಅದರಿಂದಾಗುವ ತೊಂದರೆ ಕುರಿತು ಡಾ. ಶೆರ್ಲಿ ವಿವರಿಸಿದರು. ನಲವತ್ತು ವರ್ಷ ದಾಟಿದ ಮೇಲಂತೂ ಬೊಜ್ಜು ಸಾಮಾನ್ಯ ಎಂಬಂತಾಗಿದೆ. ಭಾರತದಲ್ಲಿ ಶೇ. 30ರಷ್ಟು ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ ಎಂದರೆ ಅದೊಂದು ಆತಂಕದ ವಿಷಯವೇ ಹೌದು. ಬೊಜ್ಜು ಬಂದಿದೆ ಎಂದು ಇಂಗ್ಲಿಷ್ ಮೆಡಿಸಿನ್‌ಗಳ ಮೊರೆ ಹೋದರೆ, ತಾತ್ಕಾಲಿಕ ಪರಿಹಾರ ದೊರೆಯಬಹುದು. ಆದರೆ, ಅದರಲ್ಲಿರುವ ರಾಸಾಯನಿಕ ವಸ್ತುಗಳಿಂದ ದೇಹದಲ್ಲಿರುವ ವಿಟಮಿನ್,ಮಿನರಲ್ಸ್‌ಗಳು ಹೊರ ಹೋಗುತ್ತವೆ.ಇತ್ತೀಚೆಗೆ, ಬೊಜ್ಜು ನಿವಾರಕ ಯಂತ್ರದ ಕುರಿತು ಪ್ರಚಾರ ನಡೆಸಲಾಗುತ್ತಿದೆ. ಅದರಿಂದ ಸಾಧ್ಯವಿಲ್ಲ. ಬದಲಾಗಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಬೊಜ್ಜನ್ನು ಹತೋಟಿಯಲ್ಲಿಡಬಹುದಲ್ಲದೆ, ಸಂಪೂರ್ಣ ಕಡಿಮೆ ಮಾಡಬಹುದು. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಏಳೆಂಟು ವಿಧದ ಯೋಗಾಸನಗಳು ಸಹಕಾರಿ ಎಂದು ತಿಳಿಸಿದರು.

ಬೊಜ್ಜು ನಿವಾರಣಾ ಶಿಬಿರ

ಪತಂಜಲಿ ಯೋಗ ಶಿಕ್ಷಣ ಸಮಿತಿ ರಾಷ್ಟ್ರಾದ್ಯಂತ ಜೂ. 5ರಿಂದ ಬೊಜ್ಜು ನಿವಾರಣಾ ಶಿಬಿರ ಹಮ್ಮಿಕೊಂಡಿದ್ದು, ಶಿಬಿರಾರ್ಥಿಗಳಿಗೆ ಪ್ರತಿನಿತ್ಯ ಅನುಸರಿಸಬೇಕಾದ ಆಹಾರ ಪದ್ಧತಿ ಹಾಗೂ ಯೋಗಾಭ್ಯಾಸದ ಕುರಿತು ಮಾರ್ಗದರ್ಶನ ನೀಡಲಾಗುವುದು. ಯಾವುದೇ ತೆರನಾದ ರಾಸಾಯನಿಕ ಪದಾರ್ಥಗಳ ಬಳಕೆಯಿಲ್ಲದೆ, ಬೊಜ್ಜನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ತಿಳಿಸಿ, ನೂರಕ್ಕೆ ನೂರರಷ್ಟು ಬೊಜ್ಜು ಇಳಿಸುತ್ತೇವೆ ಎಂದು ಯೋಗ ತಜ್ಞೆ ಡಾ. ಶೆರ್ಲಿ ಭರವಸೆ ನೀಡುತ್ತಾರೆ.

ಭಾರತದಲ್ಲೇ ಹೆಚ್ಚು ಸಮಸ್ಯೆ

ಅಮೆರಿಕಾ, ಚೀನಾ ನಂತರ ಅತಿ ಹೆಚ್ಚು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ರಾಷ್ಟ್ರ ಎಂದರೆ ಭಾರತ. ಜತೆಗೆ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲೂ ಬೊಜ್ಜಿನ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ವಿದೇಶಿಗರಿಗೆ ಕೈ, ಕಾಲು, ಹೊಟ್ಟೆ ಮುಂತಾದ ಭಾಗಗಳಲ್ಲಿ ಒಂದೇ ರೂಪದಲ್ಲಿ ಬೊಜ್ಜು ಆವರಿಸಿರುತ್ತದೆ. ಆದರೆ, ಭಾರತೀಯರಲ್ಲಿ ಹೆಚ್ಚಾಗಿ ಸೊಂಟದ ಮೇಲ್ಭಾಗದಲ್ಲಿ ಮಾತ್ರ ಬೊಜ್ಜು ಆವರಿಸಿರುತ್ತದೆ. ಈ ಕಾರಣಕ್ಕಾಗಿಯೇ ಭಾರತಕ್ಕೆ ‘ಸೆಂಟರ್ ಒಬೆಸಿಟಿ’ ಎಂದು ಹೆಸರು ಬಂದಿದೆ ಎಂದು ತಿಳಿಸಿದರು.

* ನಾಗರಾಜ ಬಿ.ಎನ್. ಹುಬ್ಬಳ್ಳಿ

Comments are closed.